
ಬೆಂಗಳೂರು; ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಪರಿಷ್ಕರಣೆ ಆಗಿದೆ. ಹಾಗಾಗಿ ಪ್ರಯಾಣಿಕರಿಗೆ ಇಂದಿನಿಂದ ಆಟೋ ಪ್ರಯಾಣ ದರದ ಬಿಸಿ ತಟ್ಟಲಿದ್ದು, ಬೆಂಗಳೂರಿಗರ ಜೇಬಿಗೆ ಕತ್ತರಿ ಬೀಳಲಿದೆ.
ಕಳೆದ ತಿಂಗಳ 14ನೇ ತಾರೀಖಿನಂದು ಬೆಂಗಳೂರು ಆಟೋ ದರವನ್ನು ಹೆಚ್ಚಿಸಿ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.
ಈ ಆದೇಶ ಇಂದಿನಿಂದ ಜಾರಿಗೆ ಬರುತ್ತಿದ್ದು, ಮಿನಿಮಮ್ ಆಟೋ ಪ್ರಯಾಣ ದರ 30ರಿಂದ 36 ರೂಪಾಯಿ ಏರಿಕೆ ಆಗಿದ್ದು, ನಂತರದ ಪ್ರತಿ ಕಿ.ಮೀ.ಗೆ 15ರೂ ಇದ್ದ ದರವನ್ನು ಇದೀಗ 18 ರೂಪಾಯಿಗೆ ನಿಗದಿ ಮಾಡಲಾಗಿದೆ. ಬೆಂಗಳೂರಿಗರಿಗೆ ದುಬಾರಿ ದುನಿಯಾದಲ್ಲಿ ಆಟೋ ಪ್ರಯಾಣ ದರ ಹೆಚ್ಚಾದ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಆಟೋ ದರ ಏರಿಕೆಗೆ ಸಾರಿಗೆ ಇಲಾಖೆಯು ಹಲವು ಕಾರಣಗಳನ್ನು ಮುಂದಿಟ್ಟಿದೆ. ಇಂಧನ ಬೆಲೆಗಳ ಏರಿಕೆ, ವಾಹನಗಳ ನಿರ್ವಹಣೆ ವೆಚ್ಚ, ಜೀವನ ವೆಚ್ಚದ ಹೆಚ್ಚಳ, ಮತ್ತು ಆಟೋ ಚಾಲಕರ ಆದಾಯದಲ್ಲಿ ಸುಧಾರಣೆಯ ಅಗತ್ಯವನ್ನು ಇಲಾಖೆಯು ದರ ಏರಿಕೆಗೆ ಪ್ರಮುಖ ಕಾರಣಗಳಾಗಿ ಉಲ್ಲೇಖಿಸಿದೆ. ಆಟೋ ಚಾಲಕರ ದರ ಏರಿಕೆ ಬೇಡಿಕೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಈಗ ದರ ಪರಿಷ್ಕರಣೆಗೆ ಮುಂದಾಗಿದೆ. ಆಟೋ ದರ ಪರಿಷ್ಕರಣೆ ಸಮಿತಿಯೂ ಮಾರ್ಚ್ ತಿಂಗಳಲ್ಲಿ ಆಟೋ ದರ ಏರಿಕೆಗೆ ಸಂಬಂಧಿಸಿದಂತೆ ಸಭೆ ಮಾಡಿತ್ತು. ಹಲವು ಆಟೋ ಸಂಘಟನೆಗಳು ಮತ್ತು ಚಾಲಕರು ಸಭೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಲಾಗಿತ್ತು.














