ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ನಗರದ ವತಿಯಿಂದ ದಿ। ಶ್ರೀ ಪರಮೇಶ್ವರ ಗೌಡ ಇವರ ಪತ್ನಿ ಶ್ರೀಮತಿ ಪುಷ್ಪಾವತಿ ಇವರಿಗೆ “ಕಾರ್ಗಿಲ್ ವಿಜಯ್ ದಿವಸ್ “ಸಂದರ್ಭದಲ್ಲಿ ಗೌರವಸಲ್ಲಿಕೆ -ಕಹಳೆ ನ್ಯೂಸ್

ಪುತ್ತೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ನಗರದ ವತಿಯಿಂದ ದಿ। ಶ್ರೀ ಪರಮೇಶ್ವರ ಗೌಡ ಇವರ ಪತ್ನಿ ಶ್ರೀಮತಿ ಪುಷ್ಪಾವತಿ ಇವರಿಗೆ ಕಾರ್ಗಿಲ್ ವಿಜಯ್ ದಿವಸ್ ದ ಸಂದರ್ಭದಲ್ಲಿ ಮನೆಗೆ ತೆರಳಿ ಗೌರವಿಸಲಾಯಿತು.
ದಿ। ಶ್ರೀ ಪರಮೇಶ್ವರ ಗೌಡ ಇವರು ಕಡಬ ತಾಲೂಕು ದೋಳ್ಪಾಡಿ ಗ್ರಾಮದ ಕಟ್ಟಿ ನಿವಾಸಿ ದಿ। ಲಿಂಗಪ್ಪ ಗೌಡ ಮತ್ತು ಶ್ರೀಮತಿ ಚೋಮಕ್ಕ ದಂಪತಿಗಳ ದ್ವಿತೀಯ ಪುತ್ರರಾಗಿ ದಿನಾಂಕ 07-04-1963ರಲ್ಲಿ ಜನಿಸಿದರು. ದೋಳ್ಪಾಡಿ, ಚಾರ್ವಕ ಮತ್ತು ಪುತ್ತೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟುವಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು.
ವಿದ್ಯಾರ್ಥಿ ದಿಶೆಯಲ್ಲಿಯೇ ಎನ್.ಸಿ.ಸಿ. ಕ್ಯಾಪ್ಟನ್ ಆಗಿದ್ದ ಇವರಿಗೆ ದೇಶ ಸೇವೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. 27-01-1980ರಲ್ಲಿ ಭಾರತೀಯ ಮದ್ರಾಸ್ ಇಂಜಿನಿಯರಿಂಗ್ (M.E.G.) ಗ್ರೂಪ್ ನ 430ನೇ ಫೀಲ್ಡ್ ಕಂಪೆನಿಯ 203ನೇ ಇಂಜಿನಿಯರಿಂಗ್ ರೆಜಿಮೆಂಟಿನ ಯೋಧನಾಗಿ ಭೂ ಸೇನೆಯಲ್ಲಿ ಸೇರ್ಪಡೆಗೊಳ್ಳುತ್ತಾರೆ.
ಭೂ ಸೇನೆಗೆ ಸೇರ್ಪಡೆಗೊಂಡ ಯೋಧ ಪರಮೇಶ್ವರ ಗೌಡ ಬೆಂಗಳೂರಿನಲ್ಲಿ ತರಬೇತಿ ಪಡೆದ ಬಳಿಕ ತೀಹ್, ಲಡಾಖ್, ಅಸ್ಸಾಂ, ರಾಜಸ್ಥಾನ, ಸೂರತ್ ಗಡ್ ಮುಂತಾದ ಕಡೆ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ, ಅನೇಕ ಪ್ರಶಸ್ತಿಗಳನ್ನು ಪಡೆದು ಹುದ್ದೆಯಲ್ಲಿ ಭಡ್ತಿಗೊಂಡು ಜಮ್ಮುವಿನಲ್ಲಿ ಹವಲ್ದಾರ್ ಆಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಭಯಾನಕ ಕಾರ್ಗಿಲ್ ಕದನದಲ್ಲಿ ಭಾಗವಹಿಸಿದ ಶ್ರೀಯುತರು, ಭಾರತ-ಪಾಕಿಸ್ತಾನದ ಅಘೋಷಿತ ಕದನದಲ್ಲಿ ಜಮ್ಮುಕಾಶ್ಮೀರದ ‘ಉಧಂಪುರ’ ಸಮೀಪ ‘ಕೆಹರಿ’ ಎಂಬಲ್ಲಿ ದಿನಾಂಕ 09-06-2002ರಂದು ಭಾರತ ಮಾತೆಯ ರಕ್ಷಣೆಗೆ ಪಾಕ್ ಶೆಲ್ ದಾಳಿಗೆ ತುತ್ತಾಗಿ ವೀರ ಮರಣವನ್ನು ಹೊಂದಿದ್ದಾರೆ. ಭಾರತ ಮಾತೆಯ ಸೇವೆಗೆ ಪ್ರಾಣವನ್ನೇ ಪಣಕಿಟ್ಟ ತಮಗೆ ಶತಕೋಟಿ ಪ್ರಣಾಮಗಳು.
ಈ ಸಂದರ್ಭದಲ್ಲಿ ಅಭಾವಿಪ ರಾಷ್ಟ್ರೀಯ
ಕಾರ್ಯಕಾರಿಣಿ ಸದಸ್ಯೆ ಕು.ಮಂದಾರ ಬಾಳುಗೋಡು , ಪುತ್ತೂರು ಜಿಲ್ಲಾ ಸಂಚಾಲಕರಾದ ಸಮನ್ವಿತ್ ಕೆ , ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಹಾಗೂ ರಾಜ್ಯ ಕಾರ್ಯಸಮಿತಿ ಸದಸ್ಯೆ ಕು. ಅಮೃತಾಂಬ , ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಹಾಗೂ ರಾಜ್ಯ ಕಾರ್ಯಕಾರಣಿ ಸದಸ್ಯೆ ಕು. ಸಿಂಚನ ಮತ್ತು ಕಾರ್ಯಕರ್ತರಾದ ಮೋನಿಶ್ ಉಪಸ್ಥಿತರಿದ್ದರು.














