
ಬೆಂಗಳೂರು: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗಗಳು ಸೇರಿದಂತೆ ಇಡೀ ರಾಜ್ಯದಲ್ಲಿ (Karnataka) ಭಾರೀ ಮಳೆಯಾಗುತ್ತಿದೆ (Rain). ಕರಾವಳಿ, ಮಲೆನಾಡು ಭಾಗಗಳಲ್ಲಿ ಅಪಾಯದ ಮಟ್ಟ ಮೀರಿ ನದಿಗಳು (Rivers) ಹರಿಯಯುತ್ತಿವೆ. ಬಹುತೇಕ ಕಡೆ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಡ್ಯಾಂಗಳು (Dam) ಭರ್ತಿಯಾಗಿವೆ, ನದಿಗಳು ಉಕ್ಕಿ ಹರಿಯುತ್ತಿವೆ.
ರಾಜ್ಯದ ಹಲವು ನದಿಗಳು ಅಪಾಯದ ಮಟ್ಟ ಮೀರು ಹರಿಯುತ್ತಿವೆ. ತುಂಗಾ, ಭದ್ರಾ ನದಿಗಳಿಂದ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಭದ್ರಾವತಿಯಲ್ಲಿ ಹೊಸ ಸೇತುವೆಯ ಮೇಲೆ ನೀರು ಹರಿದು, ಹೊಸ ಸೇತುವೆ ಮೇಲೆ ವಾಹನ ಸಂಚಾರವನ್ನು ಸದ್ಯ ನಿರ್ಬಂಧಿಸಲಾಗಿದೆ.
ಕವಲುಗುಂದಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನರು ಪರದಾಡುತ್ತಿದ್ದಾರೆ. ತುಂಗಾನದಿ ಮಟ್ಟವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಮತ್ತೂರಿನಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಹೊಸಪೇಟೆ ಟಿಬಿ ಡ್ಯಾಂ ನಿಂದ ಭಾರೀ ಪ್ರಮಾಣದ ನೀರು ರಿಲೀಸ್ ಮಾಡಲಾಗಿದೆ.
ಇನ್ನೊಂದೆಡೆ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮ ಶ್ರೀರಂಗಪಟ್ಟಣದಲ್ಲಿ ಅಪಾಯದ ಮಟ್ಟ ಮೀರಿ ನದಿ ಹರಿಯುತ್ತಿದೆ. ಅವಘಡಗಳನ್ನು ತಪ್ಪಿಸಲು ಬಲಮುರಿ, ರಂಗನತಿಟ್ಟು, ಸ್ನಾನಘಟ್ಟಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.
ಕೊಳ್ಳೆಗಾಲ ತಾಲೂಕಿನಲ್ಲೂ ಪ್ರವಾಹದ ಭೀತಿ ಉಂಟಾಗಿದೆ. ಉಜನಿ ಜಲಾಶಯದಿಂದ ಕಲಬುರಗಿ ಜಿಲ್ಲೆಯಲ್ಲಿ ಬ್ಯಾರೇಜ್‌ನಿಂದ 41,600 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮತ್ತಷ್ಟು ನೀರು ಬಿಡುಗಡೆ ಸಾಧ್ಯತೆ ಇರುವುದರಿಂದ ಜನರು ಮುಂಜಾಗೃತೆಯನ್ನು ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದರೊಂದಿಗೆ ಭೀಮಾ ನದಿ ತೀರದಲ್ಲಿ ಹೆಚ್ಚಿನ ನೀರು ನಿಡುಗಡೆ ಮಾಡಿದರೆ ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ನದಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಅತ್ತ ಭಾರೀ ಮಳೆಯಿಂದಾಗಿ ಶಿವಮೊಗ್ಗದ ಜೋಗ ಜಲಪಾತಕ್ಕೆ ಕಳೆ ಬಂದಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಹವಾಮಾನ ಇಲಾಖೆ ಈ ಬಗ್ಗೆ ಮೊದಲೇ ಮುನ್ಸೂಚನೆ ನೀಡಿತ್ತು. ಅಪಾಯದ ಮಟ್ಟ ಮೀರಿ ನದಿಗಳು ಹರಿಯುತ್ತಿವೆ. ಡ್ಯಾಮ್ ಗಳಿಂದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಕೆಲವೆಡೆ ಸುರಕ್ಷತೆಯ ದೃಷ್ಟಿಯಿಂದ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ತಲುಪಿಸಲಾಗುತ್ತಿದೆ.
ಇನ್ನೊಂದೆಡೆ ಡ್ಯಾಂಗಳು ಭರ್ತಿಯಾಗುತ್ತಿರುವುದರಿಂದ ಅದನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ವಿಜಯನಗರ, ಕಲಬುರಗಿ, ಮಂಡ್ಯದಲ್ಲೂ ಜನ ಡ್ಯಾಂಗಳನ್ನು ನೋಡಲು ಬರುತ್ತಿದ್ದಾರೆ.
ಕರುನಾಡಲ್ಲಿ ಆಗಸ್ಟ್ 3 ರವರೆಗೆ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ವರುಣ ಅಬ್ಬರಿಸಲಿದ್ದಾನೆ. ಕರಾವಳಿ ಸೇರಿ 7 ಜಿಲ್ಲೆಗಳಲ್ಲಿ ಆಗಸ್ಟ್ 3ರವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಪ್ರಮುಖವಾಗಿ ಕರಾವಳಿ, ಕೊಡಗು ಹಾಗೂ ಮಲೆನಾಡಲ್ಲಿ ಭಾರಿ ಮಳೆಯಾದ್ರೆ, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಕೊಂಚ ತಗ್ಗಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆಯಾಗಲಿದೆ.














