
ನವದೆಹಲಿ : ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿ ವಿರುದ್ದ ಪ್ರಕರಣದ ದಾಖಲಿಸಿದ್ದ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇ.ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಇದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಮಹತ್ವದ ಗೆಲುವು ದೊರತಂತಾಗಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರನ್ನಾಧರಿಸಿ ಜಾರಿ ನಿರ್ದೇಶನಾಲಯದ ತನಿಖೆ ಕೈಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಜಾರಿ ನಿರ್ದೇಶನಾಲಯವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ರಾಜಕೀಯ ಯುದ್ಧ ಚುನಾವಣೆಯಲ್ಲಿ ನಡೆಯಲಿ. ನ್ಯಾಯಾಲಯದಲ್ಲಿ ಬೇಡ. ರಾಜಕೀಯ ದಾಳವಾಗಿ ಇದನ್ನು ಪರಿವರ್ತಿಸಬೇಡಿ ಎಂದು ಹೇಳಿದ್ದಾರೆ. ಅಲ್ಲದೇ ಇಂಥಾ ಚಟುವಟಿಕೆ ಮುಂದುವರೆಸಿದರೆ ಇ.ಡಿ ಬಗ್ಗೆ ಕಠಿಣವಾಗಬೇಕಾಗುತ್ತದೆ ಎಂದು ಸುಪ್ರಿಂ ಎಚ್ಚರಿಕೆಯನ್ನೂ ರವಾನಿಸಿದೆ.
ಸಿಎಂ ಪತ್ನಿ ವಿರುದ್ದ ದಾಖಲಿಸಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇ.ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣವನ್ನು ಪರಿಶೀಲಿಸಿದ ಉಚ್ಚ ನ್ಯಾಯಾಲಯ ಹೈಕೋರ್ಟ್ ಆದೇಶವನ್ನು ರದ್ದುಪಡಿಸಲು ನಿರಾಕರಿಸಿದೆ.
ಮೈಸೂರಿನ ಮುಡಾ ಕಚೇರಿ ಮೇಲೆ ಧಿಡೀರ್ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ , ಮೊದಲು ನಮಗೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ನಿವೇಶನಗಳ ಮೂಲ ದಾಖಲೆ ಕೊಡಿ ಎಂದು ಮುಡಾ ಅಧಿಕಾರಿಗಳಿಗೆ ತಾಕೀತು ಮಾಡಿತ್ತು.
ಸುಮಾರು 8 ಅಧಿಕಾರಿಗಳು ಆಗಮಿಸಿದ್ದು, ಮುಡಾ ಆಯುಕ್ತ ರಘುನಂದನ್ ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಡಾದಲ್ಲಿ ನಡೆದಿರುವ 50:50 ಹಗರಣದ ಬಗ್ಗೆ ತನಿಖೆ ನಡೆಸಲಾಗಿತ್ತು.
ಪಾರ್ವತಿ ಸಿದ್ದರಾಮಯ್ಯ ಅವರ ಮೂಲ ದಾಖಲಾತಿ ಕೇಳಿದಾಗ, ನಕಲು ಪ್ರತಿ ಸಾಕೇ ಎಂದು ಮುಡಾ ಅಧಿಕಾರಿಗಳು ನುಣುಚಿಕೊಳ್ಳಲು ಯತ್ನಿಸಿದ್ದಾರೆಂದು ವರದಿಯಾಗಿತ್ತು. ಈ ವೇಳೆ ನಮಗೆ ಮೂಲ ದಾಖಲೆಯೇ ಬೇಕು ಪಟ್ಟು ಹಿಡಿದಿದ್ದ ಇ.ಡಿ. ಅಧಿಕಾರಿಗಳು, ಪಾರ್ವತಿ ಸಿದ್ದರಾಮಯ್ಯ ಕೇಸ್ ಸಂಬಂಧ 2004 ರಿಂದ 2023ರವರಗಿನ ಮೂಲ ದಾಖಲೆ ತಕ್ಷಣ ಒದಗಿಸಿ ಎಂದು ತಾಕೀತು ಮಾಡಿದ್ದರು. ಜೊತೆಗೆ, ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರನ್ನ ದಾಖಲೆ ತರಲು ಹೊರಗೆ ಕಳುಹಿಸಿದ ಅಧಿಕಾರಿಗಳು, 50:50 ವಿಚಾರ ಏನು, ಇಲ್ಲಿಯವರೆಗೆ ಎಷ್ಟು ಸೈಟ್ ಗಳು ಹಂಚಿಕೆಯಾಗಿದೆ ಎಂದು ಪರಿಶೀಲನೆ ನಡೆಸಿದ್ದರು.














