ಭತ್ತದ ನೇಜಿ ನೆಡುವ ಕಾರ್ಯದಲ್ಲಿ ಭಾಗಿಯಾದ ಕುಂದಾಪುರ ತಾಲ್ಲೂಕಿನ ಗುರುಕುಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಕುಂದಾಪುರ: ಕುಂದಾಪುರ ತಾಲ್ಲೂಕಿನ ಬಾಂಡ್ಯ ಗ್ರಾಮದ, ಕೆಳ ಬಾಂಡ್ಯದ ಕೃಷಿ ಗದ್ದೆಗಳಲ್ಲಿ ಭಾನುವಾರ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಭತ್ತದ ನೇಜಿ ನೆಡುವ ಕಾರ್ಯದಲ್ಲಿ ಭಾಗಿಯಾದರು.
ಆಗೊಮ್ಮೆ, ಈಗೊಮ್ಮೆ ಭೋ ಎಂದು ಸುರಿಯುವ ಪುನರ್‌ವಸು ಮಳೆ. ಅಕ್ಕ-ಪಕ್ಕದಲ್ಲೆಲ್ಲ ಕೆಸರು ತುಂಬಿದ ಗದ್ದೆಗಳು, ಮೊಳಕಾಲೆತ್ತರಕ್ಕೆ ಉಡುಪನ್ನು ಕಟ್ಟಿಕೊಂಡು ಗದ್ದೆಗಿಳಿದ ಮಕ್ಕಳಲ್ಲಿ ನಾವೇನು ಈ ಕ್ಷೇತ್ರಕ್ಕೆ ಹೊಸಬರಲ್ಲ ಎನ್ನುವ ಹುಮ್ಮಸ್ಸು. ಸ್ಥಳೀಯ ಮಹಿಳೆಯರೊಂದಿಗೆ ಕೈಜೋಡಿಸಿ ಕ್ಷಣಾರ್ಧದಲ್ಲಿ ಸಾಲು ಸಾಲು ನೇಜಿ ಗಿಡಗಳನ್ನು ಗದ್ದೆಯ ಕೆಸರಿನಲ್ಲಿ ಇಡುವ ಮಕ್ಕಳ ಕೈಚಳಕವನ್ನು ನೋಡುತ್ತಿದ್ದ, ಸ್ಥಳೀಯ ಅನುಭವಿ ಕೃಷಿಕರಿಂದ ಮೆಚ್ಚುಗೆಯ ಮಹಾಪೂರ.
ಈ ಅಪೂರ್ವ ದೃಶ್ಯಗಳಿಗೆ ಸಾಕ್ಷಿಯಾದದ್ದು, ಬಾಂಡ್ಯ ಗ್ರಾಮದ, ಕೆಳ ಬಾಂಡ್ಯದ ಕೃಷಿ ಗದ್ದೆಗಳು. ಇಂದಿನ ಮಕ್ಕಳಲ್ಲಿ ಮರೆಯಾಗುತ್ತಿರುವ ಕೃಷಿ ಆಸಕ್ತಿಯನ್ನು ನಮ್ಮ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನ 10 ನೇ ತರಗತಿಯ ವಿದ್ಯಾರ್ಥಿಗಳಿಗೆ, ಪ್ರತಿ ವರ್ಷದಂತೆ ಭತ್ತ ಬೆಳೆಯುವ ಸಮಗ್ರ ಮಾಹಿತಿ ನೀಡುವ ಈ ವರ್ಷದ ‘ ನಾಟಿ ನೆಡುವ ‘ ಕಾರ್ಯಕ್ರಮ ನಡೆಯಿತು.
ಗುರುಕುಲ ವಿದ್ಯಾಸಂಸ್ಥೆಯ ಬಸ್ಸುಗಳಲ್ಲಿ ವಕ್ವಾಡಿಯಿಂದ ಶಿಕ್ಷಕರ ಜೊತೆ ಬೆಳಿಗ್ಗೆ ಬಾಂಡ್ಯಕ್ಕೆ ಬಂದಿಳಿದಿದ್ದ 141 ವಿದ್ಯಾರ್ಥಿಗಳು ನೋಡ ನೋಡುತ್ತಲೇ ವಿಸ್ತಾರವಾದ ಗದ್ದೆಗಳಲ್ಲಿ ಇಳಿದು ನಾಟಿ ಕಾರ್ಯಕ್ಕೆ ತಯಾರಿ ನಡೆಸಿದ್ದರು. ಬಾಂಡ್ಯ ಎಜುಕೇಶನಲ್ ಟ್ರಸ್ಟಿನ ಜಂಟಿ ಕಾರ್ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ್ ಎಸ್ ಶೆಟ್ಟಿಯವರು ತಮ್ಮ 4 ಎಕ್ರೆ ವಿಸ್ತೀರ್ಣದ ಗದ್ದೆಯಲ್ಲಿ ಕೃಷಿ ನಾಟಿ ಕಾರ್ಯಕ್ರಮದಲ್ಲಿ ನೇಜಿಯನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು
ವಿದ್ಯಾರ್ಥಿಗಳಿಂದಲೇ ನಾಟಿ:
ಉದ್ಯೋಗ, ತಂತ್ರಜ್ಞಾನ, ನಿರಾಸಕ್ತಿ ಮುಂತಾದ ಕಾರಣಗಳಿಂದ ಕೃಷಿ ಕ್ಷೇತ್ರದಿಂದ ಯುವ ಸಮುದಾಯ ವಿಮುಖವಾಗುತ್ತಿರುವುದನ್ನು ಗಮನಿಸಿದ್ದ, ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್, ಕಳೆದ ಕೆಲ ವರ್ಷಗಳಿಂದ ತಮ್ಮದೇ ಶಾಲೆಯ ವಿದ್ಯಾರ್ಥಿಗಳ ಮೂಲಕ ಗ್ರಾಮೀಣ ಭಾಗದ ಕೃಷಿ ಗದ್ದೆಗಳಲ್ಲಿ ಭತ್ತದ ಗಿಡಗಳ ನಾಟಿ ಕಾರ್ಯದ ಕಸುಬನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಪ್ರತಿ ವರ್ಷದ ಆಟಿ ತಿಂಗಳು ಪ್ರಾರಂಭವಾಗುತ್ತಿದ್ದಂತೆಯೆ ಮಲೆನಾಡಿನ ಗ್ರಾಮೀಣ ಭಾಗವಾದ ಕೆಳ ಬಾಂಡ್ಯದಲ್ಲಿ ಗದ್ದೆಗಳನ್ನು ಹಸನು ಮಾಡಿ ವಿದ್ಯಾರ್ಥಿಗಳಿಂದಲೇ ನಾಟಿ ಕಾರ್ಯ ಮಾಡಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಮುಹೂರ್ತವನ್ನು ನಿಗದಿ ಮಾಡಿದ ಬಳಿಕ ಸಂಸ್ಥೆಯ ಶಿಕ್ಷಕ ವೃಂದದ ಜೊತೆ ವಿದ್ಯಾರ್ಥಿಗಳನ್ನು ಕರೆತಂದು ಕೆಸರು ತುಂಬಿದ ಗದ್ದೆಗಳಲ್ಲಿಯೇ ಕೃಷಿ ಹಬ್ಬವನ್ನ ಸ್ಥಳೀಯ ಕೃಷಿಕರೊಂದಿಗೆ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಸ್ಥಳೀಯ ಅನುಭವಿ ಕೃಷಿಕರೇ ಇವರಿಗೆಲ್ಲ ಕೃಷಿ ಪಾಠ ಮಾಡುವ ಮೇಷ್ಟ್ರಗಳಾಗುತ್ತಾರೆ. ನೇಜಿಯನ್ನು ಹೊತ್ತು ತರುವುದು, ಗದ್ದೆಗಳನ್ನು ಹಸನು ಮಾಡುವುದು, ಅಂಚು ಕಡಿಯುವುದು, ನೇಜಿಯನ್ನು ಸಾಲಾಗಿ ನಾಟಿ ಮಾಡುವವರೆಗೂ ಮಕ್ಕಳಿಗೆ ಮಾರ್ಗದರ್ಶನ ದೊರೆಯುತ್ತದೆ. ಮಕ್ಕಳೊಂದಿಗೆ ಮಕ್ಕಳಾಗಿ ಈ ಊರಿನ ಹಿರಿಯ ಕೃಷಿಕರು ಸಂಭ್ರಮಿಸಿದರು.
ಮಕ್ಕಳಿಗೆ ನಾಟಿ ಕಾರ್ಯವನ್ನು ಕಲಿಸಿದ ಬಳಿಕ ಶಿಕ್ಷಕರು ಹಾಗೂ ಸ್ಥಳೀಯರು ಸುಮ್ಮನೆ ಕುಳಿತಿರುವುದಿಲ್ಲ. ಮಕ್ಕಳೊಂದಿಗೆ ತಾವು ನಾಟಿ ಕಾರ್ಯದಲ್ಲಿ ಜೊತೆಯಾಗುತ್ತಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಪೈಪೋಟಿಗೆ ಇಳಿಯುವ ವಿದ್ಯಾರ್ಥಿಗಳು ಅನುಭವಿ ಕೃಷಿಕರನ್ನು ಮೀರಿಸುವಂತೆ ಕ್ಷಣಾರ್ಧದಲ್ಲಿ ನಾಟಿ ಸಾಲುಗಳನ್ನು ಪೂರೈಸಿ ಸಂಭ್ರಮಿಸುವ ಪರಿಯೇ ಅಚ್ಚರಿ ಮೂಡಿಸಿದೆ.
ಕೆಸರು ಗದ್ದೆಯಲ್ಲೇ ಆಟದ ಸಂಭ್ರಮ :
ಮಲೆನಾಡಿನ ಹಳ್ಳಿಯಲ್ಲಿ ಮಕ್ಕಳಾಟಕ್ಕೆ ಕ್ರೀಡಾಂಗಣವಾಗಿದ್ದೇ ಕೆಳ ಬಾಂಡ್ಯದ ಕೆಸರು ತುಂಬಿದ ಗದ್ದೆಗಳು. ಜೀವನದಲ್ಲಿ ಮೊದಲ ಬಾರಿಗೆ ಕೃಷಿ ಗದ್ದೆಯಲ್ಲಿ ಭತ್ತದ ಗಿಡಗಳ ನಾಟಿ ಮಾಡುವುದನ್ನು ಕರಗತ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ, ಕೃಷಿ ಗದ್ದೆಗಳು ಜೀವನದ ಹೊಸ ಪಾಠಕ್ಕೆ ಆಡೊಂಬೊಲವಾಗಿತ್ತು.
ಕೊಪ್ಪಳ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಬೆಂಗಳೂರು, ಶಿರಸಿ, ಕಾರವಾರ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಜನೆಗಾಗಿ ಗುರುಕುಲಕ್ಕೆ ಬಂದಿದ್ದ ವಿದ್ಯಾರ್ಥಿಗಳು ನಾಟಿ ಕೆಲಸದ ಬಳಿಕ ಕೆಸರು ತುಂಬಿದ ಗದ್ದೆಗಳಲ್ಲಿ, ಹಗ್ಗ ಜಗ್ಗಾಟ, ಕಬ್ಬಡಿ, ನಿರೋಟ ಸೇರಿದಂತೆ ಆಟವನ್ನು ಆಡಿ ಹಾಗೂ ಪರಸ್ಪರ ಮೈ ಕೈಗಳಿಗೆ ಕೆಸರು ಎರಚಿಸಿಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಂಡ್ಯ ಎಜುಕೇಷನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಅನುಪಮಾ.ಎಸ್.ಶೆಟ್ಟಿ ಅವರು, ಗುರುಕುಲ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಗಳ ಜೊತೆ ಜೀವನಾನುಭವಗಳನ್ನು ಕಲಿಸುವ ಉದ್ದೇಶದಿಂದ, ಭತ್ತ ಹೇಗೆ ಬೆಳೆಯಲಾಗುತ್ತದೆ ಎನ್ನುವುದನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಈ ಬಾರಿ ಎಸ್ಎಸ್ಎಲ್‌ಸಿ ತರಗತಿಯ 141 ವಿದ್ಯಾರ್ಥಿಗಳು ಭತ್ತದ ಗಿಡದ ನಾಟಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಪ್ರತಿ ವರ್ಷವೂ ಮಕ್ಕಳು ಈ ದಿನಕ್ಕಾಗಿ ಕಾದು ಸಂಭ್ರಮಿಸುತ್ತಾರೆ.
ಗ್ರಾಮೀಣ ಭಾಗದ ಗದ್ದೆಗಳಲ್ಲಿ ಸಾಂಪ್ರದಾಯಿಕ ಭತ್ತದ ಕೃಷಿ ಮರೆಯಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಸಂಸ್ಥೆಯಿಂದ ನಡೆಯುತ್ತಿದೆ ಎಂದರು.
ಆಧುನೀಕತೆಯ ಪರ್ವದಲ್ಲಿ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಕೃಷಿ ಪರಂಪರೆ, ಮುಂದಿನ ಪೀಳಿಗೆಗೆ ಉಳಿಯಬೇಕು ಎನ್ನುವ ಉದ್ದೇಶದಿಂದ ಸಾವಯವ ಮಾದರಿಯ ಕೃಷಿ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ.
ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಜಂಟಿ ಕಾರ್ಯ ನಿರ್ವಾಹಕ ಟ್ರಸ್ಟಿ ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ಪ್ರಾಂಶುಪಾಲೆ ರೂಪಾ ಶೆಣೈ ಅವರು, ನಗರದ ಬಹುತೇಕ ಮಕ್ಕಳಿಗೆ ಅಕ್ಕಿಯಿಂದ ಅನ್ನವಾಗುತ್ತದೆ ಎನ್ನುವ ಸಾಮಾನ್ಯ ಅರಿವು ಇರೋದಿಲ್ಲ. ಆಧುನಿಕತೆಯ ಹೊಸ್ತಿಲ್ಲನ್ನು ದಾಟಿರುವ ನಮ್ಮ ಮುಂದಿನ ಪೀಳಿಗೆಗೆ ಕೃಷಿ ಚಟುವಟಿಕೆಗಳ ಬಗ್ಗೆ ಪಠ್ಯ, ಪ್ರಾಯೋಗಿಕ ಹಾಗೂ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡುತ್ತೇವೆ. ಮಣ್ಣಿನಲ್ಲಿ ಆಡುವ ಆಟೋಗಳಿಗೆ ಉತ್ತೇಜನ ನೀಡಿ, ಮಕ್ಕಳ ಕ್ರೀಯಾಶೀಲತೆಯನ್ನು ಬೆಳೆಸುತ್ತೇವೆ ಎಂದರು.
3 ವರ್ಷದಿಂದ ಈ ದಿನಕ್ಕಾಗಿ ಕಾಯುತ್ತಿದ್ದ ನಾವೆಲ್ಲ ತುಂಬಾ ಸಂಭ್ರಮ ಪಟ್ಟಿದ್ದೇವೆ. ಇಲ್ಲಿನ ಸಾಲು ಗದ್ದೆ ನಾಟಿ ಹೊಸ ಅನುಭವ ನೀಡಿದೆ.
ಶಶಾಂಕ್ ಶಿರಸಿ. ವಿದ್ಯಾರ್ಥಿ ಮುಖಂಡ ಊಟದ ಬಟ್ಟಲಿಗೆ ಬೀಳುವ ಅನ್ನಕ್ಕಾಗಿ ಬೆಳೆಯುವ ಭತ್ತದ ಕೃಷಿಯ ಹಿಂದಿರುವ ರೈತರ ಕಷ್ಟದ ಬಗ್ಗೆ ಇಂದು ಅರಿವು ಮೂಡಿದೆ. ಅವನಿ ಬೇಳೂರು . ವಿದ್ಯಾರ್ಥಿನಿ ನಾಯಕಿ ಬಾಂಡ್ಯ ಎಜುಕೇಷನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಸುಭಾಶ್ಚಂದ್ರ ಶೆಟ್ಟಿ, ವಿಶ್ವಸ್ಥ ಮಂಡಳಿ ಸದಸ್ಯ ರಾಜೇಶ್ ಕೆ.ಸಿ, ತಾ.ಪಂ ಮಾಜಿ ಸದಸ್ಯ ದೇವದಾಸ ಶೆಟ್ಟಿ ಆಜ್ರಿ, ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿಗಳು ಇದ್ದರು.













