ಅಶ್ಲೀ*ಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕಿಡ್ನಾಪ್: ರೇಣುಕಾಸ್ವಾಮಿ ಹೆಸರು ಹೇಳಿ ಹಲ್ಲೆ – ಕಹಳೆ ನ್ಯೂಸ್

ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಅಶ್ಲೀ*ಲ ಮೆಸೇಜ್ ಮಾಡಿದ್ದಕ್ಕಾಗಿ ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕೊ*ಲೆ ಮಾಡಲಾಗಿತ್ತು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಇದೀಗ ಅದೇ ಮಾದರಿಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಯುವತಿಯ ವಿಚಾರಕ್ಕೆ ಗುಂಪೊಂದು ಕುಶಾಲ್ ಎನ್ನುವ ಯುವಕನನ್ನು ಕಿಡ್ನಾಪ್ ಮಾಡಿ ಹಿಗ್ಗಾಮುಗ್ಗಾವಾಗಿ ಥಳಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿರುವುದು ವರದಿಯಾಗಿದೆ.
ಏನಿದು ವಿಚಾರ?:
ಕಾಲೇಜಿನಲ್ಲಿ ಕುಶಾಲ್‌ಗೆ ಯುವತಿಯೊಬ್ಬಳ ಜತೆ ಪ್ರೀತಿ ಆಗಿತ್ತು. ಎರಡು ವರ್ಷಗಳ ಪ್ರೀತಿ ಕೆಲ ತಿಂಗಳ ಹಿಂದಷ್ಟೇ ಮುರಿದು ಬಿದ್ದಿತ್ತು. ಈ ವೇಳೆ ಯುವತಿಗೆ ಬೇರೊಬ್ಬ ಯುವಕನ ಪರಿಚಯವಾಗಿತ್ತು ಎನ್ನಲಾಗಿದೆ. ಈ ವಿಚಾರ ಕುಶಾಲ್‌ನ ಗಮನಕ್ಕೆ ಬಂದಿದ್ದು, ಆತ ಇದನ್ನು ಸಹಿಸಲಾಗದೆ ತನ್ನ ಮಾಜಿ ಪ್ರಿಯತಮೆಗೆ ಅಶ್ಲೀ*ಲ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದ್ದಾನೆ ಎನ್ನಲಾಗಿದೆ.
ಯುವತಿಗೆ ಅಶ್ಲೀ*ಲ ಸಂದೇಶ ಕಳುಹಿಸುತ್ತಿರುವ ವಿಚಾರ ಆಕೆಯ ಸ್ನೇಹಿತರಿಗೆ ಗೊತ್ತಾಗಿದೆ. ಇದನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವ ಎನ್ನುವ ಯೋಜನೆಯನ್ನು ಹಾಕಿಕೊಂಡು ಯುವತಿಯ ಸ್ನೇಹಿತರು ಕುಶಾಲ್‌ನನ್ನು ಬಾಗಲಗುಂಟೆಯ ಎಜಿಪಿ ಲೇಔಟ್ಗೆ ಕರೆಸಿಕೊಂಡು ಅಪಹರಿಸಿದ್ದಾರೆ ಎಂದು ವರದಿಯಾಗಿದೆ.
ಬಟ್ಟೆ ಬಿಚ್ಚಿಸಿ ಹಲ್ಲೆ: ರೇಣುಕಾಸ್ವಾಮಿಯಂತೆ ಮಾಡುತ್ತೇವೆ ಎಂದ ಆರೋಪಿಗಳು..
ಕುಶಾಲ್‌ನನ್ನು ಕಿಡ್ನಾಪ್ ಮಾಡಿಕೊಂಡು ಬಂದ ಗುಂಪು, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕುಶಾಲ್‌ನನ್ನು ಕೋಲಿನಿಂದ ಹೊಡೆದು, ಆತನ ಬಟ್ಟೆ ಬಿಚ್ಚಿಸಿ ಮರ್ಮಾಂಗಕ್ಕೆ ತುಳಿದು ವಿಕೃತಿ ಮೆರೆದಿದ್ದಾರೆ. ಈ ಕೃತ್ಯವನ್ನು ಗುಂಪಿನಲ್ಲಿದ್ದ ಒಬ್ಬಾತ ವಿಡಿಯೋ ಮಾಡಿದ್ದು, ಇದು ರೇಣುಕಾಸ್ವಾಮಿ ಕೇಸ್‌ನಂತೆ ಆಗುತ್ತೆ ಎಂದಿದ್ದಾನೆ. ಎ1 ಹೇಮಂತ ಎ2 ನಾನು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಬಳಿಕ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಕುಶಾಲ್‌ಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ.
ನಾಲ್ವರ ಬಂಧನ:
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದು, ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಹೇಮಂತ್, ಯಶವಂತ್, ಶಿವಶಂಕರ್, ಶಶಾಂಕ್ ಗೌಡ ಎನ್ನುವವರನ್ನು ಬಂಧಿಸಲಾಗಿದೆ.
ಸದ್ಯ ಕುಶಾಲ್ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.














