
ಹೊಸನಗರ: ಒಂದು ವರ್ಷದಿಂದ ನಾಪತ್ತೆಯಾಗಿದ್ದ ರಾಯಚೂರು ಮಸ್ಕಿ ತಾಲೂಕಿನ ಯುವಕನೋರ್ವ ಹೊಸನಗರ ತಾಲೂಕಿನ ಬಿದನೂರು ನಗರದಲ್ಲಿ ಪತ್ತೆಯಾದ ಘಟನೆ ಬುಧವಾರ (ಜು.2) ನಡೆದಿದೆ.
ನಗರ ಸಮೀಪದ ನೂಲಿಗ್ಗೇರಿಯಲ್ಲಿ ಹಸಿವು, ಬಾಯಾರಿಕೆ ತಣಿಸಿಕೊಳ್ಳಲು ಚರಂಡಿಯ ಕೊಳಕು ನೀರು ಕುಡಿಯುತ್ತಿದ್ದ ವೇಳೆ ಸ್ಥಳೀಯ ಯಕ್ಷಗಾನ ಕಲಾವಿದ ಗಮನಿಸಿದ್ದಾರೆ.
ಕೂಡಲೇ ಅವನಿಗೆ ಊಟೋಪಚಾರ ನೀಡಿ ಬಟ್ಟೆಯನ್ನು ನೀಡಿದ್ದಾರೆ. ಯಾರು ಎಲ್ಲಿ ಎಂದು ಪ್ರಶ್ನಿಸಿದಾಗ ಸುಮ್ಮನೆ ಮಣಗುಟ್ಟುತ್ತಿದ್ದ ಯುವಕ ತೊದಲು ನುಡಿಯಲ್ಲೇ ರಾಯಚೂರು, ಮಸ್ಕಿ ಎಂದು ಹೇಳಿದ್ದಾನೆ. ಕೂಡಲೇ ಸ್ಥಳೀಯರನ್ನು ಸಂಪರ್ಕಿಸಿ ಪರಿಚಯದವರು ಇದ್ದರೇ ಮಾಹಿತಿ ಎಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಯಿತು.
ನೂಲಿಗ್ಗೇರಿ, ದುಬಾರತಟ್ಟಿ ಯುವಕರ ಸಹಕಾರ ಮತ್ತು ಜಾಲತಾಣದ ಗೆಳೆಯರ ಸ್ಪಂದನೆಯಿಂದ ಕೇವಲ ಒಂದೇ ಗಂಟೆಯೊಳಗೆ, ಆ ಹುಡುಗ ದಾವೂದ್ (20) ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತೀರ್ಥಭಾವಿ ಗ್ರಾಮಕ್ಕೆ ಸೇರಿದ ಹುಸೇನಾಬಿಯವರ ಮಗ ಎಂದು ತಿಳಿದುಬಂದಿದೆ.
ಅದಾದ ಮೇಲೆ ನಗರ ಠಾಣಾ ಎಎಸ್‌ಐ ಕುಮಾರ್ ಮೂಲಕ ಮಸ್ಕಿ ಪೊಲೀಸ್ ಠಾಣೆಯನ್ನು ಅಗತ್ಯ ಮಾಹಿತಿಯನ್ನು ಪಡೆಯಲಾಯಿತು. ನಂತರ ತೀರ್ಥಬಾವಿಯ ಹುಡುಗನ ತಾಯಿ ಹುಸೇನಾಬಿಗೆ ಮಾಹಿತಿ ಮುಟ್ಟಿಸಿ ನಗರಕ್ಕೆ ಬರಲು ತಿಳಿಸಲಾಯಿತು.
ಹುಸೇನಾಬಿ ಮತ್ತು ಬಂಧುಗಳು ಇಲ್ಲಿಂದ ನಾನೂರು ಕಿಮೀ ದೂರದಿಂದ ರಾತ್ರಿ ಹೊರಟು ಬೆಳಿಗ್ಗೆ 6 ಗಂಟೆಗೆ ನಗರಕ್ಕೆ ಆಗಮಿಸಿದರು. ಪೊಲೀಸರ ಸಮ್ಮುಖದಲ್ಲಿ ಎಲ್ಲವನ್ನು ವಿಚಾರಿಸಿ ನಂತರ ಅವರರೊಂದಿಗೆ ಯುವಕ ದಾವೂದ್ ನನ್ನು ಕಳುಹಿಸಿಕೊಡಲಾಯಿತು.
ನೂಲಿಗ್ಗೇರಿ ಮತ್ತು ದುಬ್ಬಾರತಟ್ಟಿ ಯುವಕರ ತಂಡ ರಾತ್ರಿ ದಾವೂದ್ ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆ ಮಾಡಿಸಿ, ಊಟೋಪಚಾರ ನೀಡಿ ಬೆಳಿಗ್ಗೆಯವರೆಗೂ ಕಾದು ಆತನನ್ನು ಅಮ್ಮನ ಮಡಿಲು ಸೇರಿಸಿದ್ದು ಪ್ರಶಂಸೆಗೆ ಪಾತ್ರವಾಯಿತು.
ತಾಯಿ ಹುಸೇನಾಬಿ ಮಗನಿಗಾಗಿ ಒಂದು ವರ್ಷ ರಾಜ್ಯದ ಮೂಲೆಮೂಲೆಯಲ್ಲಿ ಮಾತ್ರವಲ್ಲದೇ ನೆರೆಯ ಆಂಧ್ರ ಮತ್ತು ತೆಲಂಗಾಣದಲ್ಲೂ ಹುಡುಕಾಟ ನಡೆಸಿದ್ದೆವು. ಗಂಡನನ್ನು ಕಳೆದುಕೊಂಡು 12 ವರ್ಷವಾಗಿದೆ. ಇರುವ ಒಬ್ಬನೇ ಮಗನಿಗಾಗಿ ಪರಿತಪಿಸುತ್ತಿದ್ದೆವು. ನೀವು ನನ್ನ ಮಗನನ್ನು ರಕ್ಷಿಸಿ ನನಗೆ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಾಚರಣೆಯಲ್ಲಿ ಕಾರ್ತಿಕಗೌಡ ಮಲ್ನಾಡ್, ಸುಪ್ರೀತ್ ಡಿಸೋಜ, ಸತೀಶಶೆಟ್ಟಿ, ಹಿದಾಯತ್, ಅಬುಬಕರ್, ನವೀನ್, ಹಂಝಾ, ಹರೀಶ ವಕ್ರತುಂಡ, ಆದರ್ಶ, ಚೇತನ್, ಫಯಾಜ್, ಅಶೋಕ, ನಗರ ಮತ್ತು ಮಸ್ಕಿ ಪೊಲೀಸರು ಸಹಕಾರ ನೀಡಿದರು.














