
ಹೊಸನಗರ: ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ. ಸರ್ಕಾರಿ ಶಾಲೆ ಶಿಕ್ಷಕರೆಂದರೆ ಮೂಗು ಮುರಿಯುವ ಸನ್ನಿವೇಶದಲ್ಲಿ ಈ ಗ್ರಾಮದ ಮುಖ್ಯಶಿಕ್ಷಕಿಯೊಬ್ಬರು ತೋರಿದ ಕಾಳಜಿ, ಮಾದರಿ ಮಾತ್ರವಲ್ಲ ಪ್ರೇರಣೆ ಎನಿಸಿದೆ.
ತಾಲೂಕಿನ ಸಂಪೆಕಟ್ಟೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಟಿ.ಜಿ.ಕ್ಷಮಾ ಅವರು ತನ್ನದೇ ಶಾಲೆಯ ಅಭಿವೃದ್ಧಿಗೆ ತನ್ನ ಸಂಬಳದಲ್ಲಿ ಬರೋಬ್ಬರಿ 1 ಲಕ್ಷ ರೂ.
ಹಣವನ್ನು ದೇಣಿಗೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಈ ಶಾಲೆಯ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ಷಮಾ ಶಾಲೆಯ ಬೆಳವಣಿಗೆಗೆ ತನ್ನದೇ ಕೊಡುಗೆ ನೀಡುತ್ತಾ ಬಂದಿದ್ದಾರೆ. ಕಳೆದ 3 ವರ್ಷದಲ್ಲಿ 3 ಬಾರಿಯೂ ಸಂಪೆಕಟ್ಟೆ ಪ್ರೌಢಶಾಲೆ ಎಸ್.ಎಸ್.ಎಲ್.ಸಿ. ಯಲ್ಲಿ ಶೇ.100 ಪಲಿತಾಂಶ ದಾಖಲಿಸುವ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕ್ಷಮಾ ಅವರ ಕೊಡುಗೆ ಮಹತ್ತರವಾಗಿದೆ.
ಇದೀಗ ತನ್ನ ಸಂಬಳದಲ್ಲಿ ಲಕ್ಷ ದೇಣಿಗೆ ನೀಡುವ ಮೂಲಕ ಶಿಕ್ಷಕ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ ಮಾತ್ರವಲ್ಲದೆ, ಊರಿನ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರೂ.1 ಲಕ್ಷದ ಚೆಕ್ ಅನ್ನು ಸಮಿತಿಗೆ ಹಸ್ತಾಂತರಿಸಿದರು.
ಈ ವೇಳೆ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಊರಿನ ಪ್ರಮುಖರು ಹಾಜರಿದ್ದರು.













