
ವಾಷಿಂಗ್ಟನ್: ಇರಾನ್ ನ ಮೂರು ಪ್ರಮುಖ ಅಣುಸ್ಥಾವರಗಳ ಮೇಲೆ ಅಮೆರಿಕ ಸೇನೆ ವೈಮಾನಿಕ ದಾಳಿ ನಡೆಸಿದ ನಂತರ ಇರಾನ್ ಪ್ರತೀಕಾರದ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಅಮೆರಿಕದ ಪ್ರಮುಖ ನಗರಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಅಮೆರಿಕ ವಾಯುಪಡೆ ಇರಾನ್ ನ ನತಾಂಜ್, ಫೋರ್ಡೊ ಭೂಗತ ಸ್ಥಾವರ , ಇಸ್ಫಹಾನ್ ಅಣುಸ್ಥಾವರದ ಮೇಲೆ ದಾಳಿ ನಡೆಸಿತ್ತು. ಬಳಿಕ ಅಮೆರಿಕದ ನಗರಗಳನ್ನು ಗುರಿಯಾಗಿರಿಸಿಕೊಂಡು ತಕ್ಕ ಪ್ರತೀಕಾರದ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿತ್ತು.
ಇರಾನ್, ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಅಮೆರಿಕ ಶನಿವಾರ ಮಧ್ಯರಾತ್ರಿ ನೇರವಾಗಿ ಪ್ರವೇಶಿಸುವ ಮೂಲಕ ಇರಾನ್ ನ ಮೂರು ಅಣುಸ್ಥಾವರದ ಮೇಲೆ ದಾಳಿ ನಡೆಸುವ ಮೂಲಕ ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ ಕವಿದಂತಾಗಿದೆ.
ಮಾಧ್ಯಮದ ವರದಿಯ ಪ್ರಕಾರ, ಇರಾನ್ ದಾಳಿಯ ಎಚ್ಚರಿಕೆ ನಂತರ ಅಮೆರಿಕದ ಪ್ರಮುಖ ನಗರಗಳಾದ ನ್ಯೂಯಾರ್ಕ್, ವಾಷಿಂಗ್ಟನ್ ಡಿ.ಸಿ ಮತ್ತು ಲಾಸ್ ಏಂಜಲೀಸ್ ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ನಗರಗಳಲ್ಲಿ ಅಮೆರಿಕದ ಅಧಿಕಾರಿಗಳು ಹೆಚ್ಚಿನ ಭದ್ರತಾ ಸಿಬಂದಿಗಳನ್ನು ನಿಯೋಜಿಸಿರುವುದಾಗಿ ವಿವರಿಸಿದೆ.
ನ್ಯೂಯಾರ್ಕ್ ನಗರದ ಧಾರ್ಮಿ, ಸಾಂಸ್ಕೃತಿಕ ಹಾಗೂ ರಾಯಭಾರಿ ಕಚೇರಿ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಮತ್ತೊಂದೆಡೆ ಅಮೆರಿಕದ ಸೈಬರ್ ಡಿಪಾರ್ಟ್ ಮೆಂಟ್ಸ್, ಇರಾನ್ ನ ಸಂಭಾವ್ಯ ದಾಳಿಯನ್ನು ತಡೆಯಲು ಸಕ್ರಿಯವಾಗಿರುವುದಾಗಿ ವರದಿ ತಿಳಿಸಿದೆ














