
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಈ ತಿಂಗಳ 27ರಂದು ಬಿಬಿಎಂಪಿ ವತಿಯಿಂದ ಆಚರಿಸಲಿದ್ದು, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆಯ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಪಾಲಿಕೆ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಕೆಂಪೇಗೌಡ ಜಯಂತಿಯನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲು ಚರ್ಚೆ ನಡೆಸಿ ಸಿಧತೆ ಆರಂಭಿಸಿದ್ದೇವೆ.
ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ. ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ವಿತರಿಸುವ ಸಂಬಂಧ ಡಿಸಿಎಂ ಪಟ್ಟಿ ಕಳುಹಿಸಿದ ಬಳಿಕ ತೀರ್ಮಾನಿಸಲಾಗುವುದು. ಒಟ್ಟಾರೆ ಜಯಂತಿಯನ್ನು ಯಶಸ್ಸುಗೊಳಿಸಲು ನಾವು ಶ್ರಮಿಸುತ್ತೇವೆ ಎಂದರು.
ಬಿಬಿಎಂಪಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದ ಕಾರಣ 2021ರಿಂದ ಸತತ ನಾಲ್ಕು ವರ್ಷ ಕೆಂಪೇಗೌಡ ಜಯಂತಿಯನ್ನೇ ಆಚರಿಸಿರಲಿಲ್ಲ. ಸಾಂಕೇತಿಕವಾಗಿ ಆಚರಿಸಿದ ಬಳಿಕ ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಪಾಲಿಕೆ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದರು. ನಗರ ನಿರ್ಮಾತೃ ಬಗ್ಗೆ ಪಾಲಿಕೆ ಉದಾಸೀನ ಮಾಡುತ್ತಿದೆ ಎಂಬ ಆಕ್ಷೇಪ ತೀವ್ರಗೊಳ್ಳುತ್ತಿರುವ ಸಮಯದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ಬಾರಿ ಜಯಂತಿ ಆಯೋಜಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದಾರೆ. ಜೂ.27ರ ಸಂಜೆ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಿಗದಿಯಾಗಿದೆ.
ಜಯಂತಿ ಅಂಗವಾಗಿ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗೆ ಆಯೋಜಿಸಿರುವ ವಾರ ಕಾಲದ ಕ್ರೀಡಾಕೂಟಕ್ಕೆ ಗುರುವಾರ ತೆರೆ ಬೀಳಲಿದೆ.
ಕೆ.ಆರ್.ಮಾರುಕಟ್ಟೆ ಅಭಿವೃದ್ಧಿಗೆ ಯೋಜನೆ:
ನಗರದ ಕೆ.ಆರ್.ಮಾರುಕಟ್ಟೆಯನ್ನು ಸಮಗ್ರ ಅಭಿವೃದ್ಧಿಪಡಿಸಲು ವಿವರವಾದ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ಸದ್ಯ ಅಲ್ಲಿ ಒಂದೇ ಕಡೆ ತರಕಾರಿ ಮಾರಾಟ ಸೇರಿ ವಿವಿಧ ಚಟುವಟಿಕೆ ನಡೆದಿದೆ. ಮೂರು ಮಹಡಿಯ ಕಾಂಪ್ಲೆಕ್ಸ್ ಸರಿಯಾಗಿ ಸದ್ಬಳಕೆ ಆಗುತ್ತಿಲ್ಲ. ಬೇಸ್‌ಮೆಂಟ್ ಬಹಳ ಕೆಟ್ಟ ಪರಿಸ್ಥಿತಿ ಇದೆ. ಒಳಚರಂಡಿ ವ್ಯವಸ್ಥೆ ಕೂಡ ಸಮಪಕವಾಗಿಲ್ಲ. ಹೀಗಾಗಿ ಮಾರುಕಟ್ಟೆಯನ್ನು ಉತ್ತಮಗೊಳಿಸಲು ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.
ಇತ್ತೀಚಿಗೆ ಬನಶಂಕರಿಯಲ್ಲಿ ಮರ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಕ್ಷಯ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಆಸ್ಪತ್ರೆ ಬಿಲ್ ಪಾವತಿಸಲು ಪಾಲಿಕೆ ಸಿದ್ಧವಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಹೇಶ್ವರ್ ರಾವ್ ವಿವರಿಸಿದರು.
ಸುರಂಗ ಯೋಜನೆಗೆ ಶೀಘ್ರ ಟೆಂಡರ್:
ಸುರಂಗ ಯೋಜನೆಯ ಮೊದಲ ಕಾರಿಡಾರ್ ಜಾರಿ ಸಂಬಂಧ ಸರ್ಕಾರ ಒಪ್ಪಿಗೆ ನೀಡಿದೆ. ಇದನ್ನಾಧರಿಸಿ ಟೆಂಡರ್ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಸಿದ್ಧವಾಗಿರುವ ಡಿಪಿಆರ್‌ಗೆ ಹೆಚ್ಚುವರಿಯಾಗಿ ಎರಡು ಡಾಕ್ಯುಮೆಂಟ್ ತಯಾರಿಸಬೇಕಿದೆ. ಈ ಕಾರ್ಯ ಮುಗಿಯಲು 15 ದಿನ ಹಿಡಿಯಲಿದೆ. ಆ ಬಳಿಕ ಶೀಘ್ರವೇ ಟೆಂಡರ್ ಆಹ್ವಾನಿಸಲಾಗುವುದು ಎಂದು ಮಹೇಶ್ವರ್ ರಾವ್ ತಿಳಿಸಿದರು.













