
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಇಂದು ಗುರುವಾರ ಮಧ್ಯಾಹ್ನ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.
ಘಟನೆ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದ್ದು, ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಯಲಿದ್ದು, ಅಡ್ವೊಕೇಟ್ ಜನರಲ್ ಮೂಲಕ ಸರ್ಕಾರ ನ್ಯಾಯಾಲಯಕ್ಕೆ ಸಂಪೂರ್ಣ ವಿವರ ನೀಡಬೇಕಿದೆ.
ನಿನ್ನೆ ವಿಧಾನ ಸೌಧ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಡೆಯುವಾಗ ಹೈಕೋರ್ಟ್ ಕಟ್ಟಡದ ಮೇಲೆಯೂ ಜನರು ಏರಿ ವೀಕ್ಷಿಸುತ್ತಿದ್ದರು. ಈ ಸಂದರ್ಭದ ಫೋಟೋ -ವಿಡಿಯೊಗಳು ಸಾಕಷ್ಟು ಹರಿದಾಡಿದ್ದು ಭದ್ರತಾ ಲೋಪವಾಗಿದ್ದು ಸರ್ಕಾರದಿಂದ ಹೈಕೋರ್ಟ್ ವಿವರ ಕೇಳಿದೆ.
ಕ್ರೆಡಿಟ್ ಪಡೆಯುವ ಉನ್ಮಾದ: ಪೊಲೀಸ್ ಅಧಿಕಾರಿಯ ಸಲಹೆ ನಿರ್ಲಕ್ಷ್ಯಿಸಿ ಅಭಿಮಾನಿಗಳನ್ನು ಸಾವಿನ ದವಡೆಗೆ ನೂಕಿತೇ ಸರ್ಕಾರ?
ಐಪಿಎಲ್ -2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದ ನಂತರ ಕೇವಲ 24 ಗಂಟೆಯೊಳಗೆ ಬೆಂಗಳೂರಿಗೆ ಬಂದು ಸರ್ಕಾರ ಮತ್ತು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಸಂಭ್ರಮಾಚರಣೆ ಕೈಗೊಳ್ಳಲಾಯಿತು. ಇಷ್ಟೊಂದು ತರಾತುರಿಯಲ್ಲಿ ಕಾರ್ಯಕ್ರಮ ಆಚರಿಸಿದ್ದೇಕೆ, ಅದಕ್ಕೆ ಪೂರ್ವ ತಯಾರಿ ನಡೆಸಲಾಗಿತ್ತೇ, ಪೊಲೀಸ್ ಭದ್ರತೆ ಹೇಗೆ ಕೈಗೊಳ್ಳಲಾಯಿತು, ಭೀಕರ ಕಾಲ್ತುಳಿತ ಹೇಗೆ ಉಂಟಾಯಿತು ಎಂಬ ಬಗ್ಗೆ ಸರ್ಕಾರ ಹೈಕೋರ್ಟ್ ಗೆ ಉತ್ತರ ನೀಡಬೇಕಿದೆ.
ಇನ್ನೂ ದಾಖಲಾಗದ ಎಫ್‌ಐಆರ್
ಐಪಿಎಲ್ ವಿಜಯೋತ್ಸವ ಆಚರಣೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನ ಗಾಯಗೊಂಡರೂ ಇನ್ನೂ ಎಫ್ ಐಆರ್ ದಾಖಲಾಗಿಲ್ಲ. ಘಟನೆಯನ್ನು ಕೇವಲ ‘ಅಸಹಜ ಸಾವು (UDR)’ ಎಂದು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹನ್ನೊಂದು ಯುಡಿಆರ್ ದಾಖಲಾಗಿವೆ.














