
ಬೆಂಗಳೂರು: ಅವಧಿಗೂ ಮುನ್ನವೇ ರಾಜ್ಯ ಪ್ರವೇಶಿಸಿದ ಮುಂಗಾರು ಮಳೆ, ರಾಜ್ಯದ ಬಹುತೇಕ ಕಡೆಗಳಲ್ಲಿ ಸುರಿಯುತ್ತಿದೆ ಹಾಗೂ ಕೆಲವು ಜಿಲ್ಲೆಗಳಲ್ಲಿ ಅಆಹುತವನ್ನೇ ಸೃಷ್ಟಿಸಿದೆ. ವಾಯುಭಾರ ಕುಸಿತ ಮುಂಗಾರು ಮಳೆಯ ಅಬ್ಬರ ಹೆಚ್ಚಿಸಿದೆ.
ಇನ್ನೂ ಮೂರು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಭಾರೀ ಮಳೆ ಹಿನ್ನೆಲೆ ಶಾಲೆ-ಕಾಲೇಜಿಗೂ ರಜೆ ಘೋಷಣೆ ಮಾಡಲಾಗಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಸೇರಿ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಬಾಗಲಕೋಟೆ, ಯಾದಗಿರಿ, ಹಾವೇರಿ, ಗದಗ, ಹಾಸನದಲ್ಲಿ ಯಲ್ಲೋ ಅಲರ್ಟ್ ಇದ್ದರೆ, ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ್ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ. ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಲೇ ಇದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ಬಳಿ ಭೂಕುಸಿತ ಉಂಟಾದ ಪರಿಣಾಮ ಒಂದೇ ದಿನ ನಾಲ್ವರು ಸಾವನ್ನಪ್ಪಿದ್ದಾರೆ. ಗುಡ್ಡ ಕುಸಿದ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ ಜನರು ಎಚ್ಚರವಾಗಿರಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಇಂದು (ಮೇ 31, 2025) ಕೂಡ ರೆಡ್ ಅಲರ್ಟ್ ಘೋಷಿಸಿದೆ. 115 ಮಿಮೀ ನಿಂದ 204 ಮಿಮೀ ವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಗುಡುಗು, ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಎಚ್ಚರಿಕೆ ನೀಡಲಾಗಿದೆ. ಶಾಲೆ-ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ನೀಡಿದೆ. ಈ ಪ್ರದೇಶಗಳಲ್ಲಿ ಗುಡುಗು ಮತ್ತು ಜೋರಾದ ಗಾಳಿಯೊಂದಿಗೆ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.













