ರಸ್ತೆ ಬದಿ ಕುಸಿದು ನೀರಿನ ಪೈಪ್ ಲೈನ್ ಗೆ ಹಾನಿ ; 5 ಪಂಚಾಯತ್ ಗಳಿಗೆ ನೀರಿಲ್ಲ- ಕಹಳೆ ನ್ಯೂಸ್

ಬಂಟ್ವಾಳ: ಮಣಿಹಳ್ಳ- ಅಜಿಲಮೊಗರು ರಸ್ತೆಯ ಅಲ್ಲಿಪಾದೆ ಅಣೆಜ ತಿರುವಿನಲ್ಲಿ ರಸ್ತೆ ಅರ್ಧ ಕುಸಿದಿರುವ ಜತೆಗೆ ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ ಸಂಪೂರ್ಣ ಕುಸಿದು ಸುಮಾರು 5 ಪಂಚಾಯತ್ ಗಳಿಗೆ ನೀರಿಲ್ಲದಂತಾಗಿದೆ.
ಇಲ್ಲಿ ಕಳೆದ ವರ್ಷ ರಸ್ತೆ ಕುಸಿದಿದ್ದು, ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು.
ಆದರೆ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ಕಾಮಗಾರಿ ವಿಳಂಬವಾಗಿ ಆರಂಭಗೊಂಡು ಈ ಬಾರಿ ಮತ್ತೆ ಕುಸಿದು ಮೇ 25 ರ ರವಿವಾರ ದಂದು ನೀರಿನ ಪೈಪ್ ಲೈನ್ ಕೂಡ ಕೆಳಕ್ಕೆ ಬಿದ್ದಿದೆ ಎಂಬ ಆರೋಪ ಕೇಳಿ ಬಂದಿದೆ.
ಸರಪಾಡಿ ಬಹುಗ್ರಾಮ ಯೋಜನೆಯ ಮೂಲಕ ತಾಲೂಕಿನ ಇರ್ವತ್ತೂರು, ಪಿಲಾತಬೆಟ್ಟು, ಕಾವಳಪಡೂರು, ಕಾವಳಮೂಡೂರು, ನಾವೂರು ಗ್ರಾ.ಪಂ.ಗಳಿಗೆ ಇದೇ ರಸ್ತೆಯಲ್ಲಿ ಪೈಪ್ ಲೈನ್ ಹಾದು ಹೋಗಿದ್ದು, ಇದೀಗ ಎಲ್ಲಾ ಪಂಚಾಯತ್ ಗಳಿಗೂ ನೀರಿಲ್ಲದಂತಾಗಿದೆ.














