
ಬೆಂಗಳೂರು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಸೇನೆ ನಡೆಸಿದ ಯುದ್ಧವನ್ನು ‘ಚುಟ್-ಪುಟ್ ಯುದ್ಧ’ ಎಂದು ಹೇಳಿದ್ದು, ಈ ಹೇಳಿಕೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಟೀಕಿಸಿದ್ದಾರೆ.
‘ಸೇನೆ ನಡೆಸಿದ ಆಪರೇಷನ್ ಸಿಂಧೂರ ಬಗ್ಗೆ ಹಗುರವಾಗಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆಯವರು ತಕ್ಷಣವೇ ಸೇನೆ ಮತ್ತು ನಾಗರಿಕರ ಕ್ಷಮೆಯಾಚಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ನಿಮ್ಮ ರೀತಿಯಲ್ಲೇ ನಿಮ್ಮ ಪಕ್ಷದ ಸಚಿವರು, ಶಾಸಕರು ದೇಶದ ಸೈನ್ಯ ಮತ್ತು ಸೈನಿಕರ ಬಗ್ಗೆ ಪ್ರತಿ ನಿತ್ಯ ಟೀಕೆ ಮಾಡುತ್ತಿದ್ದಾರೆ. ಇದು ದೇಶದ ಬಗ್ಗೆ ಇರುವ ನಿಮ್ಮ ಪಕ್ಷದ ಮನಸ್ಥತಿಯನ್ನು ಎತ್ತಿ ತೋರಿಸುತ್ತದೆ’ ಎಂದಿದ್ದಾರೆ.
‘ಸೈನಿಕರು ಗಡಿಯಲ್ಲಿ ಹಗಲಿರುಳು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ದೇಶವನ್ನು ಕಾಯುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಇಂತಹ ಕ್ಷುಲ್ಲಕ ಹೇಳಿಕೆಗಳಿಂದ ದೇಶದ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಸಾಹಸಕ್ಕೆ ಅಪಮಾನ ಮಾಡಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಹೇಡಿ ಪಾಕಿಸ್ತಾನ ಮತ್ತು ಭಯೋತ್ಪಾದಕರ ಬಗ್ಗೆ ಸದಾ ಮೃದು ಧೋರಣೆ ನೀತಿ ಅನುಸರಿಸಿತ್ತು. ಹೀಗಾಗಿಯೇ ಆಪರೇಷನ್ ಸಿಂಧೂರ ನಂತಹ ಕಾರ್ಯಾಚರಣೆ ಮಾಡುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆ’ ಎಂದು ರವಿಕುಮಾರ್ ತಿಳಿಸಿದ್ದಾರೆ.
‘ವಿಧಾನಸೌಧದಲ್ಲಿ ರಾಜ್ಯಸಭಾ ಸದಸ್ಯರೊಬ್ಬರ ಬೆಂಬಲಿಗರು ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿದ್ದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ನೀವು ಸದಾ ಶತ್ರು ರಾಷ್ಟ್ರ ಪಾಕಿಸ್ತಾನದ ಹಿತ ಚಿಂತನೆಯಲ್ಲೇ ಇರುತ್ತೀರಿ’ ಎಂದು ಹೇಳಿದ್ದಾರೆ.













