
ನವದೆಹಲಿ: ಜಗತ್ತಿನಾದ್ಯಂತ ಇರುವ ನಿರಾಶ್ರಿತರಿಗೆ ಆಶ್ರಯ ನೀಡಲು ಭಾರತ ಧರ್ಮಶಾಲಾ(ಉಚಿತ ಆಶ್ರಯ) ಅಲ್ಲ ಎಂದು ಶ್ರೀಲಂಕಾ ಪ್ರಜೆಯೊಬ್ಬ ಗಡಿಪಾರು ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಸೋಮವಾರ (ಮೇ 19) ಈ ರೀತಿ ಚಾಟಿ ಬೀಸಿದೆ.
ಸುಪ್ರೀಂ ಪೀಠದ ಜಸ್ಟೀಸ್ ದೀಪಂಕರ್ ದತ್ತಾ ಮತ್ತು ಜಸ್ಟೀಸ್ ಕೆ.ವಿನೋದ್ ಚಂದ್ರನ್ ಅವರು ಶ್ರೀಲಂಕಾದ ಅಂದಿನ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ ಟಿಟಿಇ) ಜತೆಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ 2015ರಲ್ಲಿ ಬಂಧಿಸಲ್ಪಟ್ಟ ಶ್ರೀಲಂಕಾ ಪ್ರಜೆಯ ಅರ್ಜಿಯ ವಿಚಾರಣೆ ನಡೆಸಿದ್ದರು.
2018ರಲ್ಲಿ ವಿಚಾರಣಾ ನ್ಯಾಯಾಲಯ ಕಾನೂನು ಬಾಹಿರ ಚಟುವಟಿಕೆ ಕಾಯ್ದೆಯಡಿ ಶ್ರೀಲಂಕಾ ಪ್ರಜೆ ದೋಷಿ ಎಂದು ಘೋಷಿಸಿ 10 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಆದರೆ 2022ರಲ್ಲಿ ಮದ್ರಾಸ್ ಹೈಕೋರ್ಟ್, ಹತ್ತು ವರ್ಷಗಳ ಜೈಲುಶಿಕ್ಷೆಯನ್ನು ಏಳು ವರ್ಷಕ್ಕೆ ಇಳಿಕೆ ಮಾಡಿ, ಶಿಕ್ಷೆ ಪೂರ್ಣಗೊಂಡ ನಂತರ ಗಡಿಪಾರಾಗುವ ಮೊದಲು ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದು ಶೀಘ್ರವೇ ದೇಶ ತೊರೆಯುವಂತೆ ಸೂಚಿಸಿತ್ತು.
ತಾನು ವೀಸಾದೊಂದಿಗೆ ಭಾರತಕ್ಕೆ ಆಗಮಿಸಿದ್ದು, ಶ್ರೀಲಂಕಾದಲ್ಲಿ ತನ್ನ ಜೀವಕ್ಕೆ ಅಪಾಯವಿದೆ. ಅಲ್ಲದೇ ತನ್ನ ಪತ್ನಿ ಮತ್ತು ಮಕ್ಕಳು ಭಾರತದಲ್ಲಿಯೇ ನೆಲೆಸಿದ್ದಾರೆ. ನಾನು ಮೂರು ವರ್ಷದಿಂದ ಬಂಧನದಲ್ಲಿದ್ದು, ಗಡಿಪಾರು ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ, ಹೀಗಾಗಿ ಗಡಿಪಾರು ಮಾಡದೇ ಇಲ್ಲಿಯೇ ಆಶ್ರಯ ನೀಡಬೇಕು ಎಂದು ಶ್ರೀಲಂಕಾ ಪ್ರಜೆ ಸುಪ್ರೀಂಕೋರ್ಟ್ ಗೆ ತಿಳಿಸಿರುವುದಾಗಿ ವರದಿಯಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟೀಸ್ ದತ್ತಾ, ಇಡೀ ಜಗತ್ತಿನಲ್ಲಿರುವ ನಿರಾಶ್ರಿತರಿಗೆ ಭಾರತ ಆಶ್ರಯ ಕಲ್ಪಿಸಿ ಕೊಡಲು ಇದೆಯೇ? ನಾವು 140 ಕೋಟಿ ಜನಸಂಖ್ಯೆಯಿಂದ ಬಳಲುತ್ತಿದ್ದೇವೆ. ವಿದೇಶಿ ಪ್ರಜೆಗಳಿಗೆ ಆಶ್ರಯ ನೀಡಲು ಭಾರತ ಧರ್ಮಶಾಲಾ ಅಲ್ಲ ಎಂದು ತೀಕ್ಷ್ಣವಾಗಿ ಚಾಟಿ ಬೀಸಿದ್ದರು.
ಅರ್ಜಿದಾರನ ಪರ ವಕೀಲರು ಸಂವಿಧಾನದ ಕಲಂ 21 ಹಾಗೂ 19, ವಾಕ್ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳನ್ನು ನೀಡಿರುವುದಾಗಿ ವಾದ ಮಂಡಿಸಿದ್ದರು. ಇದಕ್ಕೆ ಜಸ್ಟೀಸ್ ದತ್ತಾ ಅವರು, ಅರ್ಜಿದಾರನ ಬಂಧನ ಆರ್ಟಿಕಲ್ 21ರ ಉಲ್ಲಂಘನೆಯಲ್ಲ, ಯಾಕೆಂದರೆ ಕಾನೂನಿನ ಪ್ರಕಾರ ಬಂಧನಕ್ಕೊಳಪಡಿಸಲಾಗಿದೆ. ಅಷ್ಟೇ ಅಲ್ಲ ಆರ್ಟಿಕಲ್ 19 ಭಾರತೀಯ ಪ್ರಜೆಗಳಿಗೆ ಮಾತ್ರ ಅನ್ವಯವಾಗಲಿದೆ. ಹಾಗಾದರೆ ಭಾರತದಲ್ಲೇ ನೆಲೆಯೂರುತ್ತೇನೆ ಎಂಬುದಕ್ಕೆ ನಿಮ್ಮ ಹಕ್ಕು ಏನಿದೆ ಎಂದು ಪ್ರಶ್ನಿಸಿದೆ. ಈ ವೇಳೆ ಅರ್ಜಿದಾರನ ಪರ ವಕೀಲರು, ಶ್ರೀಲಂಕಾದಲ್ಲಿ ತನ್ನ ಕಕ್ಷಿದಾರನ ಜೀವಕ್ಕೆ ಅಪಾಯವಿದ್ದು, ಇಲ್ಲಿ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿರುವುದಾಗಿ ತಿಳಿಸಿದ್ದರು…ಅದಕ್ಕೆ ಸುಪ್ರೀಂಕೋರ್ಟ್, ಬೇರೆ ದೇಶಕ್ಕೆ ವಲಸೆ ಹೋಗಲು ತಿಳಿಸಿರುವುದಾಗಿ ವರದಿ ವಿವರಿಸಿದೆ.














