
ಮಂಗಳೂರು : ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರ ಸುಳ್ಳು ಸುದ್ದಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ದೂರು ದಾಖಲಾದ ಹಿನ್ನಲೆಯಲ್ಲಿ ‘ಶಂಖನಾದ’ ಹೆಸರಿನ ಇನ್ ಸ್ಟಾಗ್ರಾಮ್ ಪೇಜ್ ಅನ್ನು ನಿಷೇಧಿಸಲಾಗಿದೆ.

ಈ ಪೇಜ್ ನಲ್ಲಿ ಹನ್ನೊಂದು ಸಾವಿರ ಮಂದಿ ಫಾಲೋವರ್ ಗಳಿದ್ದು , ಸುಹಾಸ್ ಹತ್ಯೆ ಖಂಡಿಸಿ ಅಲ್ಲಲ್ಲಿ ನಡೆಯುವ ಪ್ರತಿಭಟನೆಗಳ ಪೋಸ್ಟರ್ ಮತ್ತು ಹತ್ಯೆ ಪೊಲೀಸ್ ಇಲಾಖೆಯ ವೈಫಲ್ಯವೆಂದು ಬಿಂಬಿಸುವ ಪೊಸ್ಟರ್ ಹಂಚಿಕೊಳ್ಳಲಾಗಿತ್ತು. ಜನರನ್ನು ಉದ್ರೇಕಿಸಿ ಒಬ್ಬರಿಗೊಬ್ಬರು ದ್ವೇಷ ಭಾವನೆ ಹುಟ್ಟುವಂತೆ ಮಾಡಲಾಗುತ್ತಿತ್ತು ಎಂದು ಈ ಬಗ್ಗೆ ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಂಬಂಧಿಸಿದ ಪ್ರಾಧಿಕಾರಕ್ಕೆ ಪೊಲೀಸರು ಪೇಜ್ ಬಗ್ಗೆ ಮಾಹಿತಿ ನೀಡುವಂತೆ ಪತ್ರ ಬರೆದಿದ್ದರು. ಅದರಂತೆ, ಸಂಬಂಧಪಟ್ಟ ಲಾ ಎನ್ಫೋರ್ಸ್ ಮೆಂಟ್ ಏಜನ್ಸಿಯವರು ಶಂಖನಾದ ಹೆಸರಿನ ಪೇಜ್ ಅನ್ನು ರದ್ದು ಪಡಿಸಿದ್ದಾರೆ.
ಇದಕ್ಕಿಂತ ಮೊದಲು ಬ್ಯಾರಿ ರೋಯಲ್ ನವಾಬ್ ಪೇಜನ್ನು ರದ್ದು ಪಡಿಸಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ‘ಬ್ಯಾರಿ ಆಫ್ ಉಳ್ಳಾಲ’ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಎರಡು ವರ್ಷಗಳ ಹಿಂದೆ ಕೊಲೆಯಾದ ಫಾಜಿಲ್ ಫೋಟೊ ಹಾಕಿ ಮಿಸ್ ಯು ಅಂತ ಬರೆಯಲಾಗಿತ್ತು. ಇದಕ್ಕೆ ಕಮೆಂಟ್ ಹಾಕಿದ್ದ ವ್ಯಕ್ತಿಯೊಬ್ಬ ಒಂದಕ್ಕೆ ಮುಗಿದಿಲ್ಲ, ಇನ್ನೂ ನಾಲ್ಕು ಬಾಕಿಯಿದೆ ಎಂಬುದಾಗಿ ಸಂದೇಶ ಬರೆದಿದ್ದ. ಸಾಮಾಜಿಕ ಜಾಲತಾಣಗಳ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.














