ಯೋಧ ಮುರಳಿ ನಾಯಕ್ ಪಾರ್ಥಿವ ಶರೀರ ಚಿಕ್ಕಬಳ್ಳಾಪುರ ಮಾರ್ಗವಾಗಿ ಆಂಧ್ರಕ್ಕೆ – ಕಹಳೆ ನ್ಯೂಸ್

ಭಾರತ ಹಾಗು ಪಾಕಿಸ್ತಾನದ ನಡುವೆ ಸಂಘರ್ಷ ಮುಂದುವರಿದಿರುವ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಡೆದ ಶೆಲ್ ದಾಳಿಯಲ್ಲಿ ಯುವ ಸೈನಿಕ ಎಂ.ಮುರಳಿ ನಾಯಕ್ ಹುತಾತ್ಮರಾಗಿದ್ದಾರೆ. ಮೂಲತಃ ಆಂಧ್ರಪ್ರದೇಶದವರಾದ ಮುರಳಿ ಅವರ ಪಾರ್ಥಿವ ಶರೀರವು ಇಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಹುಟ್ಟೂರು ಸೇರಲಿದೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ವಿಧಾನಸಭಾ ಕ್ಷೇತ್ರದ ಗೋರಂಟ್ಲ ಮಂಡಲದ ಹಳ್ಳಿಯೊಂದರಲ್ಲಿ ಜನಿಸಿದ ಮುರಳಿ ಅವರನ್ನು ಅವರ ಚಿಕ್ಕಪ್ಪ ಲಕ್ಷ್ಮಣ ನಾಯಕ್ ಅಲ್ಲಿಯೇ ಬೆಳೆಸಿದರು. ಯಾವಾಗಲೂ ಸಮವಸ್ತ್ರದಲ್ಲಿ ದೇಶ ಸೇವೆ ಮಾಡುವ ಕನಸು ಕಂಡಿದ್ದ ಮುರಳಿ ಬಾಲ್ಯದಿಂದಲೂ ಪೊಲೀಸ್ ಅಥವಾ ಸಶಸ್ತ್ರ ಪಡೆಗಳಿಗೆ ಸೇರಲು ಬಯಸಿದ್ದರು.
ಬಿಕಾಂ ಓದುತ್ತಿರುವಾಗಲೇ ಅವರು ಸಶಸ್ತ್ರ ಪಡೆಗಳಿಗೂ ತಯಾರಿ ನಡೆಸುತ್ತಿದ್ದರು. ಅವರು ಎರಡು ಪ್ರಯತ್ನಗಳಲ್ಲಿ ವಿಫಲರಾಗಿ 2022ರಲ್ಲಿ ಅಗ್ನಿವೀರ್ ಯೋಜನೆಯಡಿಯಲ್ಲಿ ಆಯ್ಕೆಯಾದರು. ಶುಕ್ರವಾರ ಮುಂಜಾನೆ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡು ಹುತಾತ್ಮರಾದರು.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಕೂಡ ಮುರಳಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದೇಶ ರಕ್ಷಣೆಯಲ್ಲಿ ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ವಿಧಾನಸಭಾ ಕ್ಷೇತ್ರದ ಗೋರಂಟ್ಲಾ ಮಂಡಲದ ಮುರಳಿ ನಾಯಕ್ ಎಂಬ ಸೈನಿಕನನ್ನು ಕಳೆದುಕೊಂಡ ಸುದ್ದಿ ಕೇಳಿ ದುಃಖವಾಯಿತು. ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಮುರಳಿ ನಾಯಕ್ ಅವರಿಗೆ ಶ್ರದ್ಧಾಂಜಲಿಗಳು. ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಮುರಳಿ ನಿಧನಕ್ಕೆ ರಾಜ್ಯದ ರಾಜಕೀಯ ನಾಯಕರು ಕೂಡ ಸಂತಾಪ ಸೂಚಿಸಿದ್ದಾರೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದ ವೀರ ಯೋಧ ಮುರಳಿ ನಾಯಕ್ ಅವರು ಹುತಾತ್ಮರಾಗಿರುವ ಸುದ್ದಿ ತಿಳಿದು ನೋವಾಯಿತು. ಮುರಳಿ ನಾಯಕ್ ಅವರ ತ್ಯಾಗ, ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ ಎಂದು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಕಂಬನಿ ಮಿಡಿದಿದ್ದು, ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಹುತಾತ್ಮರಾದ ಯೋಧ ಮುರಳಿ ನಾಯಕ್ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಕೂಡ ವೀರ ಯೋಧ ಮುರಳಿ ನಾಯಕ್ ಅವರು ಜಮ್ಮು-ಕಾಶ್ಮೀರದ ಗಡಿಯಲ್ಲಿ ದೇಶಸೇವೆ ಸಲ್ಲಿಸುತ್ತಿದ್ದ ವೇಳೆ ಹುತಾತ್ಮರಾಗಿದ್ದಾರೆ. ಆಂಧ್ರ ಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯವರಾದ ಮುರಳಿ ನಾಯಕ್ ಅವರ ಬಲಿದಾನವನ್ನು ಈ ದೇಶ ಎಂದಿಗೂ ಮರೆಯುವುದಿಲ್ಲ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಮಸ್ತ ಭಾರತೀಯರು ಪರವಾಗಿ ಪ್ರಾರ್ಥಿಸುತ್ತೇವೆ ಎಂದು ಸಂತಾಪ ಸೂಚಿಸಿದೆ.














