ಬೆಂಗಳೂರು : ಪಾಕಿಸ್ತಾನದ ಉಗ್ರ ನೆಲೆಗಳನ್ನು ಭಾರತ ಉಡೀಸ್ ಮಾಡಿದೆ. 26 ಮಂದಿ ಭಾರತೀಯರ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಬುಧವಾರ ಮುಂಜಾನೆ ಭಾರತೀಯ ಸೇನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಆಪರೇಷನ್ ಸಿಂಧೂರ್ನಿಂದ ಪಾಕ್ ನಿದ್ರೆಗೆಟ್ಟಿದೆ. ಪಹಲ್ಗಾಮ್ನಲ್ಲಿ ಹುತಾತ್ಮರಾದ ಭಾರತೀಯರ ಸಾವಿಗೆ ನೋವಿಗೆ ನ್ಯಾಯ ಸಿಕ್ಕಿದೆ. ಇಂಥಹ ಸಂದರ್ಭದಲ್ಲಿ ಬಹಳಷ್ಟು ಜನರು ಸೇನೆಯ ಕಡೆಗೆ ತಮ್ಮ ಗೌರವ, ದೇಶದೊಂದಿಗಿನ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ವೇಳೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಆಪರೇಷನ್ ಸಿಂಧೂರ್ ಕುರಿತಾಗಿ ಮೆಚ್ಚುಗೆಯನ್ನ ತಿಳಿಸಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿಯಾದಾಗ ತೀವ್ರವಾಗಿ ಕಿಚ್ಚ ಸುದೀಪ್ ಅವರು ಖಂಡಿಸಿದ್ದರು. ಇದೀಗ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯಿಸಿದ್ದಾರೆ.ಒಬ್ಬ ಭಾರತೀಯನಾಗಿ… ಈ ಪವಿತ್ರ ಮಣ್ಣಿನ ಮಗನಾಗಿ, ಪಹಲ್ಗಾಮ್‌ನಲ್ಲಿ ನಡೆದ ಘಟನೆಯಿಂದ ನೋವಿನ ನಡುಕವನ್ನು ಅನುಭವಿಸಿದೆ. ಇಂದು, ನಾನು ನ್ಯಾಯದ ಗುಡುಗನ್ನು ಅನುಭವಿಸುತ್ತೇನೆ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.
ಆಪರೇಷನ್ ಸಿಂಧೂರ್. ಕೇವಲ ಒಂದು ಧ್ಯೇಯವಲ್ಲ, ಆದರೆ ಪವಿತ್ರ ಪ್ರತಿಜ್ಞೆ. ಭಾರತದ ಸಿಂಧೂರದಲ್ಲಿ ಕಲೆಯಾಗಿತ್ತು… ನಮ್ಮ ಧೈರ್ಯಶಾಲಿ ಸೈನಿಕರು ಧೈರ್ಯ ಮತ್ತು ನಿಖರತೆಯಿಂದ ಅದರ ಗೌರವವನ್ನು ಪುನಃಸ್ಥಾಪಿಸಿದರು. ನಮ್ಮ ಸಶಸ್ತ್ರ ಪಡೆಗಳಿಗೆ, ನನ್ನ ವಂದನೆ ಎಂದಿದ್ದಾರೆ. ನಮ್ಮ ಗೌರವಾನ್ವಿತ ಪ್ರಧಾನಿಗಳು ರಕ್ಷಣಾ ನಾಯಕತ್ವಕ್ಕೆ, ಎತ್ತರವಾಗಿ, ದೃಢವಾಗಿ ಮತ್ತು ನಿರ್ಭೀತವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ತೀಕ್ಷ್ಣವಾದ, ಘನತೆಯ ಮಾಹಿತಿಗಾಗಿ ವಂದನೆಗಳು. ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ಹೃದಯ ವಿದ್ರಾವಕ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ಬದಲಾಗಿ ನಮ್ಮ ರಾಷ್ಟ್ರದ ಚೈತನ್ಯದ ಮೇಲಿನ ದಾಳಿ. ಇದು ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ನೀಡಬೇಕಾದ ಸಮಯ ಎಂದು ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.













