ನಕ್ಸಲ್ ವಶದಲ್ಲಿದ್ದ ಕರ್ರೆಗುಡ್ಡ ಈಗ ಭದ್ರತಾ ಪಡೆಗಳ ತೆಕ್ಕೆಗೆ : ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ ಭದ್ರತಾ ಸಿಬಂದಿ- ಕಹಳೆ ನ್ಯೂಸ್

ರಾಯ್ಪುರ: ಛತ್ತೀಸ್‌ಗಢ ಹಾಗೂ ತೆಲಂಗಾಣ ಗಡಿಯಲ್ಲಿ ನಡೆಯುತ್ತಿರುವ ದೇಶದ ಅತೀದೊಡ್ಡ ನಕ್ಸಲ್ ನಿಗ್ರಹ ಕಾರ್ಯಾಚರಣೆ ‘ಆಪರೇಷನ್ ಕಾಗರ್’ ಭಾಗವಾಗಿ ಭದ್ರತಾಪಡೆಗಳು ಕರೇಗುಡ್ಡವನ್ನು ನಕ್ಸಲ್ ಮುಕ್ತಗೊಳಿಸಿದೆ. ಕಾಪ್ಟರ್‌ಗಳ ಸಹಾಯದಿಂದ ಕರೇಗುಡ್ಡದ ದಟ್ಟಾರಣ್ಯದೊಳಗೆ ಇಳಿದ ಭದ್ರತಾ ಸಿಬಂದಿ ಗುಡ್ಡ ವಶಕ್ಕೆ ಪಡೆದು ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದಾರೆ.
5,000 ಅಡಿ ಎತ್ತರದ ಕರೇಗುಡ್ಡವನ್ನು ನಕ್ಸಲರ ಕೋಟೆಯಂದೇ ಹೇಳಲಾಗುತ್ತಿತ್ತು. ಅಲ್ಲದೇ ನಕ್ಸಲರ ಭೀತಿಯಿಂದಾಗಿ ಈ ಗುಡ್ಡಕ್ಕೆ ಜನರು ಪ್ರವೇಶಿಸುತ್ತಲೂ ಇರಲಿಲ್ಲ. ಈಗ ಎ.22ರಂದು ಆರಂಭವಾದ ಈ ಕಾರ್ಯಾಚರಣೆಯಲ್ಲಿ 24,000ಕ್ಕೂ ಹೆಚ್ಚು ಭದ್ರತಾ ಸಿಬಂದಿಯನ್ನು ಬಳಸಲಾಗಿದೆ. ಈ ಕರೇಗುಡ್ಡ ನಕ್ಸಲ್ ಗುಂಪಿನ ಪ್ರಮುಖರಾದ ಮಾಧವಿ ಹಿದ್ಮಾ, ದಾಮೋದರ್, ಆಜಾದ್ ಮತ್ತಿತರರ ಅಡಗುತಾಣವಾಗಿತ್ತು.
ತೆಲಂಗಾಣದಿಂದ ರಾಜಕೀಯವಾಗಿ ಒತ್ತಡಗಳಿರುವ ನಡುವೆಯೂ ಛತ್ತೀಸ್‌ಗಢದಲ್ಲಿ ಕಾರ್ಯಾಚರಣೆ ಮುಂದುವರಿಸಿದೆ. ನಕ್ಸಲರೊಂದಿಗೆ ಮಾತುಕತೆಯಲ್ಲಿ ಸಂಧಾನ ಮಾಡಲು ತೆಲಂಗಾಣದ ನಾಯಕರು ಒತ್ತಾಯಿಸಿದ್ದರೂ, ಕಾರ್ಯಾಚರಣೆ ನಡೆಯುತ್ತಿದ್ದು, 2026ರ ನಕ್ಸಲ್ ಮುಕ್ತಭಾರತದ ಗುರಿಗೆ ಪೂರಕವಾಗಿದೆ.













