ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಮಂಗಳೂರಲ್ಲಿ ಕೊಲೆ ; ಗರಂ ಆದ ಸಿದ್ದರಾಮಯ್ಯ-ಕಹಳೆ ನ್ಯೂಸ್

ಬೆಂಗಳೂರು: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಹಾಗೂ ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಪಾಕ್ ವಿರುದ್ಧ ಆಕ್ರೋಶ ಜೋರಾಗಿದೆ. ಇನ್ನು ದೇಶದಲ್ಲಿ ಹಲವೆಡೆ ರಸ್ತೆಗಳಿಗೆ ಪಾಕ್ ಧ್ವಜ ಅಂಟಿಸಿ ಆಕ್ರೋಶ ಹೊರಹಾಕಲಾಗುತ್ತಿದೆ.
ಇನ್ನು ರಾಜ್ಯದ ಮಂಗಳೂರಿನಲ್ಲಿಯೂ ಈ ಕುರಿತಾದ ಘಟನೆ ನಡೆದಿದ್ದು, ಕುಡುಪುನಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಕಾಸರಗೋಡು ಮೂಲದ ವ್ಯಕ್ತಿಯೊಬ್ಬನ ಕೊಲೆ ನಡೆದಿದ್ದು, ಪಾಕ್ ಪರ ಘೋಷಣೆ ಕೂಗಿದ್ದೇ ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಯಾರೇ ಘೋಷಣೆ ಕೂಗಿದ್ದರೂ ಅದು ತಪ್ಪು, ಇಂತಹ ನಡೆವಳಿಕೆ ದೇಶ ದ್ರೋಹವಾಗಲಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಘಟನೆಗೆ ಸಂಬಂಧಿಸಿದಂತೆ 15 ಜನರ ಮೇಲೆ ಪ್ರಕರಣ ದಾಖಲಾಗಿದೆ. ಈ ಕುರಿತು ವರದಿ ಬರಲಿ, ಅನಂತರ ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಯಲಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ಪಾಕಿಸ್ತಾನದ ಜಿಂದಾಬಾದ್ ಎಂದು ಘೋಷಣೆ ಕೂಗಿದವರನ್ನು ಕೊಲೆ ಮಾಡಲಾಗಿದೆ ಎಂದು ಪ್ರಶ್ನೆ ಕೇಳುತ್ತಿದ್ದಂತೆ, ನೀನು ಅಲ್ಲಿದ್ದ, ನೀನು ಪ್ರತ್ಯೇಕ್ಷ ಸಾಕ್ಷಿನಾ ಎಂದು ಸಿದ್ದರಾಮಯ್ಯ ವರದಿಗಾರರನ್ನು ಖಾರವಾಗಿ ಮರು ಪ್ರಶ್ನಿಸಿದರು.
ಮುಂದುವರೆದ ಮುಖ್ಯಮಂತ್ರಿಯವರು, ಯಾರೇ ಆ ರೀತಿ ಕೂಗಿದರೂ ಅದು ತಪ್ಪು, ಪಾಕಿಸ್ತಾನದ ಪರವಾಗಿ ಯಾರೇ ಮಾತನಾಡಿದ್ದರೂ ಅದನ್ನು ಒಪ್ಪಲಾಗುವುದಿಲ್ಲ. ಸದ್ಯಕ್ಕೆ ಮಂಗಳೂರಿನ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಮೊದಲು ವರದಿ ಬರಲಿ. ನಂತರ ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ನಿರ್ಧಾರವಾಗುತ್ತದೆ ಎಂದರು.
ಏಪ್ರಿಲ್ 27ರಂದು ಮಂಗಳೂರಿನ ಕುಡುಪು ಬಳಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಗುಂಪೊಂದು ಹಲ್ಲೆ ಮಾಡಿದ್ದು, ಕೇರಳ ಕಾಸರಗೋಡಿನ ವ್ಯಕ್ತಿಯೊಬ್ಬ ಮೃತ ಪಟ್ಟಿರುವುದಾಗಿ ಹೇಳಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ 18 ಜನರನ್ನು ಬಂಧಿಸಲಾಗಿದೆ.














