ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ಬಲಿಷ್ಠ: ಸಂಸದ ಕ್ಯಾ.ಬ್ರಿಜೇಶ್ ಚೌಟ-ಕಹಳೆ ನ್ಯೂಸ್

ಬಂಟ್ವಾಳ: ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 15ನೇ ಕಲ್ಲಡ್ಕ ಶಾಖೆಯು ಶನಿವಾರ ಕಲ್ಲಡ್ಕದ ಪ್ರೀತಿ ಟವರ್ನ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಂಡಿತು.
ಶಾಖೆಯನ್ನು ಉದ್ಘಾಟಿಸಿದ ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ತುಳುನಾಡಿನ ಮಣ್ಣಿನ ಗುಣದ ಕಾರಣಕ್ಕೆ ದ.ಕ. ಜಿಲ್ಲೆಯ ಸಹಕಾರಿ ಕ್ಷೇತ್ರವು ಬಲಿಷ್ಠವಾಗಿದ್ದು, ಸಹಕಾರಿ ಸಂಘಗಳು ಬರೀ ಲಾಭವನ್ನೇ ನೋಡದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ರೀತಿ ತನ್ನ ವ್ಯವಹಾರವನ್ನು ಮಾಡಬೇಕು. ಕೇಂದ್ರ ಸರಕಾರವು ರಾಷ್ಟ್ರದ ನಿರ್ಮಾಣದಲ್ಲಿ ಕಾರ್ಯದಲ್ಲಿ ಸಹಕಾರ ಕ್ಷೇತ್ರವನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ತ್ರಿಭುವನ್ ಸಹಕಾರ ವಿಶ್ವವಿದ್ಯಾನಿಲಯ ಸ್ಥಾಪಿಸಿದ್ದು, ದ.ಕ. ಜಿಲ್ಲೆಯಲ್ಲಿ ಉದ್ಯೋಗಗಳ ಸೃಷ್ಟಿಗಾಗಿ ಸಹಕಾರಿಗಳನ್ನು ಸೇರಿಸಿಕೊಂಡು ಅಮುಲ್ ಮಾದರಿಯ ಉದ್ಯಮ ಆರಂಭಕ್ಕೆ ಪ್ರಯತ್ನಿಸಲಾಗುವುದು ಎಂದರು.
ಕಂಪ್ಯೂಟರ್ ವ್ಯವಸ್ಥೆಯನ್ನು ಉದ್ಘಾಟಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಮನುಷ್ಯನ ಜೀವನವೇ ಸಹಕಾರವಾಗಿದ್ದು, ಸಾಮಾನ್ಯ ವ್ಯಕ್ತಿಯ ಸ್ವಾಭಿಮಾನದ ಬದುಕಿಗೆ ಸಹಕಾರಿ ಸಂಘಗಳು ಕನಿಷ್ಠ ಸಂಗತಿಗಳ ಮೂಲಕ ಆರ್ಥಿಕ ನೆರವು ನೀಡುತ್ತಿದೆ. ಆದರ್ಶ ಸಂಘವು ಸಹಕಾರಿ ಕ್ಷೇತ್ರದ ಆದರ್ಶವನ್ನು ಉಳಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಶುಭಹಾರೈಸಿದರು. ಸಹಕಾರ ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಪ್ರಸ್ತಾವನೆಗೈದು, ಸಂಘವು 2024-25ನೇ ಸಾಲಿನಲ್ಲಿ 828.79 ಕೋ.ರೂ. ವ್ಯವಹಾರ ನಡೆಸಿ ದಾಖಲೆಯ 2.01 ಕೋ.ರೂ.ಲಾಭ ಗಳಿಸಿರುತ್ತದೆ. ಸಂಘವು ಸಾಮಾಜಿಕ ಕಾರ್ಯವನ್ನು ಮಾಡುತ್ತಿದೆ. ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಸವಣೂರಿನ 75 ಸೆಂಟ್ಸ್ ನಿವೇಶನದಲ್ಲಿ ಸ್ವಂತ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂದರು.
ಉದ್ಯಮಿ ಹಾಜಿ ಎನ್.ಸುಲೈಮಾನ್ ಅವರು ಪ್ರಥಮ ಠೇವಣಿ ಪತ್ರ ಬಿಡುಗಡೆಗೊಳಿಸಿ ಗ್ರಾಹಕ ರಾಧಾಕೃಷ್ಣ ನಾೖಕ್ ಅವರಿಗೆ ಹಸ್ತಾಂತರಿಸಿದರು. ಪ್ರಗತಿಪರ ಕೃಷಿಕ-ಸಹಕಾರಿಯ ನಿರ್ದೇಶಕ ಬಿ. ಮಹಾಬಲ ರೈ ಬೋಳಂತೂರು ಅವರು ಮುಖ್ಯಅತಿಥಿಗಳಾಗಿದ್ದರು. ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ನಿರ್ದೇಶಕರಾದ ಎನ್. ಜಯಪ್ರಕಾಶ್ ರೈ ಸುಳ್ಯ, ಅಶ್ವಿನ್ ಎಲ್. ಶೆಟ್ಟಿ ಸವಣೂರು,
ಕೆ. ರವೀಂದ್ರನಾಥ ಶೆಟ್ಟಿ ಕೇನ್ಯ, ಚಿಕ್ಕಪ್ಪ ನಾೖಕ್ ಅರಿಯಡ್ಕ, ಸೀತಾರಾಮ ಶೆಟ್ಟಿ ಬಿ. ಮಂಗಳೂರು, ಎಸ್.ಎಂ. ಬಾಪು ಸಾಹೇಬ್ ಸುಳ್ಯ, ವಿ.ವಿ. ನಾರಾಯಣ ಭಟ್ ನರಿಮೊಗರು, ಮಹಾದೇವ ಎಂ. ಮಂಗಳೂರು, ಎನ್. ರಾಮಯ್ಯ ರೈ ತಿಂಗಳಾಡಿ, ಪೂರ್ಣಿಮಾ ಎಸ್. ಆಳ್ವ ಮಂಗಳೂರು, ಯಮುನಾ ಎಸ್. ರೈ ಗುತ್ತುಪಾಲ್, ಮಹಾಪ್ರಬಂಧಕ ವಸಂತ್ ಜಾಲಾಡಿ, ಶಾಖಾ ವ್ಯವಸ್ಥಾಪಕ ಭರತ್‌ರಾಜ್ ಕೆ. ಉಪಸ್ಥಿತರಿದ್ದರು. ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು. ಪಂಜ ಶಾಖೆಯ ನಿವೃತ್ತ ಪ್ರಬಂಧಕ ಪರಮೇಶ್ವರ್ ಬಿಳಿಮಲೆ ನಿರ್ವಹಿಸಿದರು.














