ಶ್ರೀರಾಮ ಕಾಲೇಜು- ಪ್ರತಿಭಾ ಪುರಸ್ಕಾರ, ಪ್ರತಿಭಾ ದಿನೋತ್ಸವ ಆಕರ್ಷ್- ೨೦೨೫-ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರದೀಪ್ತ ಸಾಂಸ್ಕೃತಿಕ ಸಂಘದ ವತಿಯಿಂದ ನಡೆಯುವ ಆಕರ್ಷ್ ೨೦೨೫ ಪ್ರತಿಭಾ ಪುರಸ್ಕಾರ, ಪ್ರತಿಭಾ ದಿನೋತ್ಸವ ಕಾರ್ಯಕ್ರಮವು ದಿನಾಂಕ ೨೬/೦೪/೨೦೨೫ರಂದು ಆಜಾದ್ ಭವನ ಸಭಾಂಗಣದಲ್ಲಿ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಮ್ಮ ಭಾರತದೇಶ ಮತ್ತು ನಾವು ಹಿಂದೂಗಳು ಸದ್ಯ ಆಪತ್ತಿನ ಪರಿಸ್ಥಿತಿಯಲ್ಲಿದ್ದೇವೆ, ಪ್ರತಿಯೊಬ್ಬರೂ ತಮ್ಮ ಹವ್ಯಾಸ, ಪ್ರತಿಭೆ, ಬುದ್ಧಿಚಾತುರ್ಯಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ತಮ್ಮನ್ನು ದೇಶ ರಕ್ಷಣೆಗಾಗಿ ಮೀಸಲಿಟ್ಟರೆ ಮಾತ್ರ ನಮಗೆ ಉತ್ತಮ ಭವಿಷ್ಯ ಇದೆ ೆ ಎಂದರು. ಪ್ರಾಚಾರ್ಯ ಕೃಷ್ಣಪ್ರಸಾದ್ ವಾರ್ಷಿಕ ಚಟುವಟಿಕೆಗಳ ವರದಿವಾಚನ ಮಾಡಿ ಮಹಾವಿದ್ಯಾಲಯದ ಇಲ್ಲಿಯವರೆಗಿನ ಸಾಧನೆಗಳನ್ನು ಪ್ರಸ್ತುತಪಡಿಸಿದರು.
ಎಕೋ ಬ್ಲಿಸ್ ನ ಮಾಲಕ ರಾಜಾರಾಮ್ ಭಟ್ ಬಲಿಪಗುಳಿ, ಖ್ಯಾತ ಛಾಯಾಚಿತ್ರ ಗ್ರಾಹಕ ಅಪುಲ್ ಆಳ್ವ ಇರಾ ಹಾಗೂ ಗಾಯಕ, ನಿರೂಪಕ, ಯುವ ಬರಹಗಾರ ರಕ್ಷಣ್ ಮಾಡೂರು ಮುಖ್ಯಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
೨೦೨೪-೨೦೨೫ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ವಿವಿಧ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ ಹಾಗೂ ವಿವಿಧ ಕಾಲೇಜು, ರಾಜ್ಯ- ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ, ಅತ್ಯಧಿಕ ಅಂಕಗಳನ್ನು ಗಳಿಸಿ ವಿದ್ಯಾಲಯಕ್ಕೆ ಕೀರ್ತಿ ತಂದ ಪ್ರಸಕ್ತ ಸಾಲಿನ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ, ೧೦೦% ಹಾಜರಾತಿ ಪಡೆದ ವಿದ್ಯಾರ್ಥಿಗಳಿಗೆ, ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದ ವಿದ್ಯಾರ್ಥಿನಿ ಕು. ಶರಣ್ಯಾ, ತಮಿಳುನಾಡಿನ ಕಾಮರಾಜ್ ಯುನಿವರ್ಸಿಟಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಶಿಬಿರದಲ್ಲಿ ಮಂಗಳೂರು ಯುನಿವರ್ಸಿಟಿಯನ್ನು ಪ್ರತಿನಿಧಿಸಿದ ಕು. ಭೂಮಿಕಾ ಇವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
೨೦೨೧-೨೦೨೪ನೇ ಶೈಕ್ಷಣಿಕ ವರ್ಷಗಳಲ್ಲಿ ನಡೆದ ಮಂಗಳೂರು ಯುನಿವರ್ಸಿಟಿ ವಾಣಿಜ್ಯ ವಿಭಾಗದ ಪದವಿ ಪರೀಕ್ಷೆಗಳಲ್ಲಿ ೪ನೇ ರ್ಯಾಂಕ್ ಗಳಿಸಿದ ಕು. ನಿಶ್ವಿತಾ ಆಳ್ವ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಲಕ್ಷ್ಮೀ ರಘುರಾಜ್, ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಉಪ ಪ್ರಾಂಶುಪಾಲೆ ಶ್ರೀಮತಿ ಸುಕನ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ಸ್ವಾತಿಲಕ್ಷ್ಮಿ ಸ್ವಾಗತಿಸಿ, ಕು. ದಿವ್ಯಲಕ್ಷ್ಮಿ ವಂದಿಸಿ ಕು. ಪುನೀತಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರತಿಭಾ ಪ್ರದರ್ಶನಗಳು ಅತ್ಯದ್ಭುತವಾಗಿ ನೆರವೇರಿದವು.














