ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರ ಸಂದೀಪ್ ಪೂಜಾರಿ ನಿಧನ – ಕಹಳೆ ನ್ಯೂಸ್

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರ ಸಂದೀಪ್ ಪೂಜಾರಿ ನಿಧನರಾಗಿದ್ದು, ಶಿರ್ವದಲ್ಲಿ ಮೃತರ ಅಂತಿಮ ವಿಧಿ ವಿಧಾನ ಮತ್ತು ಅಂತ್ಯಸಂಸ್ಕಾರ ನಡೆಯಿತು.
ಸಕಲೇಶಪುರ ಸಮೀಪದ ಬಾಳ್ಳುಪೇಟೆ ಎಂಬಲ್ಲಿ ಮಾರ್ಚ್ 29ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸಂದೀಪ್ ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಪಘಾತದಿಂದ ಬೆನ್ನು ಹುರಿಗೆ ತೀವ್ರ ಪೆಟ್ಟಾಗಿ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 20ರಂದು ಕೊನೆಯುಸಿರೆಳೆದಿದ್ದರು.
ಕಾಪು ತಾಲೂಕಿನ ಶಿರ್ವ ನಿವಾಸಿಯಾಗಿರುವ ಸಂದೀಪ್ ಒಂದೂವರೆ ದಶಕದಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಪಬ್ಲಿಕ್ ಟಿವಿ, ಸ್ಪಂದನಾ ಸುದ್ದಿ ವಾಹಿನಿ, ಬಿ ಟಿವಿ, ಸಿ4u, Prime ಕಾರ್ಲದಲ್ಲಿ ಕ್ಯಾಮೆರಮೆನ್ ಆಗಿ ಕೆಲ ಸಮಯ ಕೆಲಸ ಮಾಡಿದ್ದರು. ಪ್ರಸ್ತುತ ಈಟಿವಿ ಭಾರತ್ ವಾಹಿನಿಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಸಂದೀಪ್ ತಂದೆ ತಾಯಿ ಸಹೋದರ ಹಾಗೂ ಸಹೋದರಿ, ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಆಶೀರ್ವಾದ ಮನೆಯಲ್ಲಿ ಮೃತ ದೇಹದ ಅಂತಿಮ ವಿಧಿ ವಿಧಾನ ಮತ್ತು ಶಿರ್ವ ಹಿಂದು ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಪ್ರಕ್ರಿಯೆ ನಡೆಯಿತು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಮೃತರ ಕುಟುಂಬಸ್ಥರು ಭಾಗಿಯಾಗಿದ್ದರು.














