SHOCKING: ತಡರಾತ್ರಿ ಮನೆ ಬಾಗಿಲು ಬಡಿದು ನೀರು ಕೇಳಿ ಕುಸಿದು ಬಿದ್ದ ಯುವತಿ- ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಶಂಕೆ..! –ಕಹಳೆ ನ್ಯೂಸ್

ಮಂಗಳೂರು: ಕೆಲದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಬಾಲಕಿಯ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ರಾಜ್ಯದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಸುದ್ದಿ ಬೆಳಕಿಗೆ ಬಂದಿದೆ.
ಹೌದು.. ಹೊರರಾಜ್ಯದ ಯುವತಿಯೊಬ್ಬಳು ಮಂಗಳೂರಿನ ಹೊರವಲಯ ಕಲ್ಲಾಪು ಸಮೀಪದ ನಿರ್ಜನ ಪ್ರದೇಶದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಆಕೆಯ ದೇಹದ ಅಲ್ಲಲ್ಲಿ ಗಾಯದ ಗುರುತುಗಳು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರದ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ತಡರಾತ್ರಿ ವೇಳೆ ನಶೆಯ ಸ್ಥಿತಿಯಲ್ಲಿದ್ದ ಯುವತಿ ಸ್ಥಳೀಯ ಮನೆಯೊಂದರ ಬಾಗಿಲು ತಟ್ಟಿ ನೀರು ಕೇಳಿದ್ದಾಳೆ. ಆದರೆ ನೀರು ಕೇಳಿದ ಕೆಲವೇ ಕ್ಷಣಗಳಲ್ಲಿ ಆಕೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾಳೆ. ಇದನ್ನು ಗಮನಿಸಿದ ಮನೆಯವರು ತಕ್ಷಣ ಪೊಲೀಸ್ ತುರ್ತು ಸೇವೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿ ನಶೆಯ ಸ್ಥಿತಿಯಲ್ಲಿರುವುದರಿಂದ ಮಾತನಾಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಯುವತಿ ಬಂದಿರುವ ಕಡೆಯಲ್ಲಿ ಒಂದು ನಿರ್ಜನ ಮನೆ ಇದ್ದು, ಈ ಸ್ಥಳಕ್ಕೆ ಗಾಂಜಾ ಮತ್ತು ಇತರ ಅಮಲು ವ್ಯಸನಿಗಳು ತಡರಾತ್ರಿ ನಿಯಮಿತವಾಗಿ ಆಗಮಿಸುತ್ತಿದ್ದರು ಎನ್ನಲಾಗಿದೆ. ಘಟನೆಯ ರಾತ್ರಿ ನಾಲ್ವರ ತಂಡವೊಂದು ಈ ಪ್ರದೇಶದಲ್ಲಿತ್ತು ಎಂದು ತಿಳಿದುಬಂದಿದೆ. ಆದರೆ ಯುವತಿ ನೆರೆಯ ಮನೆಗೆ ತಲುಪಿದ ಕೂಡಲೇ ಈ ತಂಡ ಪರಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.














