ಮಧುರವಾದ ಕಂಠಸಿರಿಯಿಂದಲೇ ಗಮನ ಸೆಳೆದ ಯುವ ಮಹಿಳಾ ಭಾಗವತರು ಕುಮಾರಿ ಶ್ರೀರಕ್ಷಾ ಆರ್ ಹೆಗಡೆ – ಕಹಳೆ ನ್ಯೂಸ್

ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣಗಳನ್ನು ಒಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯವಾದ ಕಲೆ ಎಂದರೆ ಅದು ಯಕ್ಷಗಾನ. ಅದೆಷ್ಟೋ ಯಕ್ಷಗಾನ ಕಲಾವಿದರು ತಮ್ಮ ಕುಟುಂಬದಲ್ಲಿ ಯಕ್ಷಗಾನ ಕಲಿತವರಿದ್ದರೆ ಅವರಿಂದ ಪ್ರೇರಣೆಗೊಂಡು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡುತ್ತಾರೆ. ಆದ್ರೆ ಇಲ್ಲೊಬ್ಬರು ಮನೆಯಲ್ಲಿ ಕಲಾವಿದರಿಲ್ಲದಿದ್ದರೂ ತಾವೇ ಸ್ವತಃ ಆಸಕ್ತಿಯಿಂದ ಯಕ್ಷಗಾನ ರಂಗಕ್ಕೆ ಪ್ರವೇಶಿಸಿ ಹೆಸರು ಮಾಡಿದ್ದಾರೆ. ಅವರೇ ಬಡಗುತಿಟ್ಟಿನ ಯುವ ಮಹಿಳಾ ಭಾಗವತರು ಕುಮಾರಿ ಶ್ರೀ ರಕ್ಷಾ ರತ್ನವರ್ಮ ಹೆಗಡೆ.

ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಲಕ್ಷ್ಮೀ ಹೆಗಡೆ ಹಾಗೂ ರತ್ನವರ್ಮ ಹೆಗಡೆಯವರ ಪುತ್ರಿಯಾಗಿರುವ ಈಕೆ ಅತ್ಯದ್ಭುತ ಮಹಿಳಾ ಭಾಗವತರು. ಶ್ರೀ ರಕ್ಷಾಗೆ ಯಕ್ಷಗಾನದ ಮೇಲೆ ಅಪಾರವಾದ ಆಸಕ್ತಿ. ಹಾಗಾಗಿ ಆಕೆ 2ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭ ಸತೀಶ್ ಉಪಾಧ್ಯಾಯ ಉಡುಪಿ ಇವರು ಬೇಸಿಗೆ ಶಿಬಿರಕ್ಕೆ ಕರೆದುಕೊಂಡು ಹೋಗ್ತಾರೆ. ಅಲ್ಲಿ ಯಕ್ಷಗಾನ ತಾಳಗಳ ಬಗ್ಗೆ ಕಲಿತು ಮೊದಲ ಬಾರಿಗೆ ರಕ್ಷಾ ಗೋಪಾಲ ವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ. ಬಳಿಕ ಇಡುವಾಣಿ ತ್ರಿಯಾಂಬಾಕ್ ಅವರ ಹತ್ತಿರ ತಾಳ ಹೆಜ್ಜೆ ಅಭ್ಯಾಸ ಮಾಡಿ 3 ವರ್ಷ 2 ಪ್ರಸಂಗಗಳಲ್ಲಿ ವೇಷ ಹಾಕಿದ್ದಾರೆ.

ಇನ್ನು ರಕ್ಷಾಗೆ ಯಕ್ಷಗಾನದ ಮೇಲೆ ಆಸಕ್ತಿ ಬರಲು ಕಾರಣ ಏನೆಂದರೆ, ರಕ್ಷಾ ತಮ್ಮ ಫ್ಯಾಮಿಲಿ ಜೊತೆ ಹೊರಗಡೆ ಹೋದಾಗ ಕಾರಿನಲ್ಲಿ ತಮ್ಮ ತಂದೆ ಕಾಳಿಂಗ ನಾವಡರ ಪದ್ಯ ಯಾವಾಗಲೂ ಹಾಕುತ್ತಾ ಇರ್ತಾರಂತೆ. ಅದೇ ನನಗೆ ಯಕ್ಷಗಾನಕ್ಕೆ ಬರಲು ಸ್ಪೂರ್ತಿ ಅನ್ನುತ್ತಾರೆ ಶ್ರೀರಕ್ಷಾ.. ಮೊದಲು ಇಡುವಾಣಿ ಅವರ ಬಳಿ ಪ್ರಾಥಾಮಿಕ ಪಾಠವನ್ನು ಕಲಿತ ಇವರು ಬಳಿಕ ಎಪಿ ಪಾಠಕ್ ಹಾಗೂ ಎನ್‍ಜಿ ಹೆಗಡೆ ಅವರ ಬಳಿ ಅಭ್ಯಾಸ ಮಾಡಿದ್ದಾರೆ.

ಇನ್ನು ಕೇವಲ ಯಕ್ಷಗಾನ ಮಾತ್ರವಲ್ಲದೇ ಭರತನಾಟ್ಯದಲ್ಲೂ ಸೀನಿಯರ್ ಹಾಗೂ ರಂಗಭೂಮಿಯಲ್ಲೂ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಭರತನಾಟ್ಯ ವಿದುಷಿ ಸೀಮಾ ಭಾಗವತ್ ಅವರಲ್ಲಿ ಸೀನಿಯರ್ ಕಲಿತಿರುವ ಇವರು, ಹಿಂದೂಸ್ತಾನಿ ಸಂಗೀತವನ್ನು ರಾಜೇಂದ್ರ ಹೆಗಡೆ ಅವರಲ್ಲಿ ಸೀನಿಯರ್ ಅಭ್ಯಾಸವನ್ನು ಮಾಡಿದ್ದಾರೆ. 2 ವರ್ಷಗಳಿಂದ ನಾಟಕ ತಂಡದಲ್ಲಿ ಹಿನ್ನಲೆ ಹಾಡುಗಾರ್ತಿಯಾಗಿ ಹಾಗೂ ಅದೇ ತಂಡದಲ್ಲಿ 1 ಪಾತ್ರವನ್ನು ಸಹ ಮಾಡಿದ್ದಾರೆ.

ಇನ್ನು ಶ್ರೀ ರಕ್ಷಾ ಮೊದಲು ವೇಷಧಾರಿಯಾಗಿ ಯಕ್ಷಗಾನದಲ್ಲಿ ಕಾಣಿಸಿಕೊಂಡಾಕೆ. ಸಣ್ಣ ಮಕ್ಕಳ ಟೀಮ್ ನಲ್ಲಿ ಸೀತಾ ಸ್ವಯಂವರದ ರಾಮ, ಕಂಸ ವಧೆಯ ಎರಡನೇ ಕಂಸ, ರುಕ್ಮಿಣಿ ಕಲ್ಯಾಣದ ಕೃಷ್ಣ ಹಾಗೂ ಹವ್ಯಾಸಿ ಆಟಗಳಲ್ಲಿ, ಮೇಳದ ಕೆಲವು ಪ್ರದರ್ಶನಗಳಲ್ಲಿ ಕೃಷ್ಣರ್ಜುನ ಕಾಳಗದ ಅಭಿಮನ್ಯು ಹಾಗೂ ಚಂದ್ರಹಾಸದ ಬಾಲಚಂದ್ರಹಾಸ ರಂಗದಲ್ಲಿ ವೇಷಧಾರಿಯಾಗಿ ಕುಣಿದ ಅನುಭವವಿರುವುದರಿಂದ ಭಾಗವತಿಕೆಗೆ ಮತ್ತಷ್ಟು ಪ್ರೇರಣೆ ಸಿಕ್ಕಿದೆ.

ಸದ್ಯ ಶ್ರೀ ರಕ್ಷಾ ಅವರು ಬಡಗುತಿಟ್ಟಿನ ಮಹಿಳಾ ಭಾಗವತಿಕೆಯ ಮೂಲಕ ತನ್ನ ಮಧುರವಾದ ಕಂಠಸಿರಿಯಿಂದಲೇ ಕಲಾಭಿಮಾನಿಗಳ ಗಮನ ಸೆಳೆಯುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಪಟ್ಲರಂತೆ ಪಟ್ಲ ಸತೀಶ್ ಶೆಟ್ಟಿಯವರು ಹಾಗೂ ಜನ್ಸಾಲೆ ರಾಘವೇಂದ್ರ ಆಚಾರ್ಯರು, ಕಾವ್ಯಶ್ರೀ ಅಜೇರು ಭಾಗವಹಿಸಿದ್ದ ಗಾನವೈಭವದಲ್ಲಿ ಮೇರು ಹಿಮ್ಮೇಳ ಕಲಾವಿದರ ಮುಂಭಾಗದಲ್ಲಿ ಕುಳಿತು ಪ್ರಸಿದ್ಧ ದೇವಿ ಮಹಾತ್ಮೆಯ ತರುಣಿ ಅಲ್ಲ ಅವಳ್ ಆದಿಮಾಯೆ ಎಂದು ಹಾಡಿದ್ದು ಯಕ್ಷಗಾನ ಲೋಕದಲ್ಲಿ ಸಂಚಲ ಸೃಷ್ಟಿಸಿತ್ತು. ವ್ಯಾಪಕ ವೈರಲ್ ಕೂಡಾ ಆಗಿತ್ತು.

ಇನ್ನು ಎಡನೀರು ಮಠವೇ ಸೇರಿದಂತೆ ಅನೇಕ ಪ್ರಸಿದ್ಧ ವೇದಿಕೆಗಳಲ್ಲಿ ಈಕೆಗೆ ಪ್ರದರ್ಶನಕ್ಕೆ ಸಿಕ್ಕ ಅವಕಾಶ ಮತ್ತಷ್ಟು ಜನಪ್ರಿಯವಾಗುವಂತೆ ಮಾಡಿತು. ಅದರಲ್ಲೂ ಕಳೆದ ವರ್ಷ ಅದಮಾರು ಮಠದ ಆಡಳಿತಕ್ಕೆ ಒಳಪಟ್ಟ ಪೂರ್ಣಪ್ರಜ್ಞಾ ಶಾಲೆಯ ಕಾರ್ಯಕ್ರಮವೊಂದರಲ್ಲಿ ಈಕೆ ಹಾಡಿದ್ದ ಪ್ರಾರ್ಥನೆ ಸಾಮಾಜಿಕ ಜಾಳತಾಣಗಳಲ್ಲಿ ಮಿಲಿಯನ್‍ಗಟ್ಟಲೆ ತಲುಪಿದ್ದು ವ್ಯಾಪಕ ಮೆಚ್ಚುಗೆಗೂ ಪಾತ್ರವಾಗಿತ್ತು.
![]()
ಶ್ರೀರಕ್ಷಾಗೆ ಪ್ರಶಸ್ತಿ, ಸನ್ಮಾನಗಳು ಅರಸಿಕೊಂಡು ಬಂದಿದೆ. 3 ಬಾರಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗಾಯನ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ. ಯೂನಿವರ್ಸಿಟಿ ಲೆವೆಲ್ ಅಲ್ಲಿ 100 ಕ್ಕೂ ಹೆಚ್ಚು ಗಾಯನ ನಾಟ್ಯ ಸ್ಪರ್ಧೆಗಳಲ್ಲಿ ಬಹುಮಾನಗಳು ಬಂದಿದೆ. ಪ್ರತಿಷ್ಠಿತ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಪಟ್ಲ ಪ್ರತಿಭಾ ಪುರಸ್ಕಾರ, ಖ್ಯಾತ ಚಿಂತಕ ಬೈಕಾಡಿ ಕೃಷ್ಣಯ್ಯ ಸ್ಮಾರಕ ” ಯಕ್ಷಶ್ರೀ ” ಪ್ರಶಸ್ತಿಯು ಲಭಿಸಿದ್ದು., ಇವರ ಮುಂದಿನ ಸಾಧನೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ.

ಕಿರಿಯ ವಯಸ್ಸಿನಲ್ಲಿಯೇ ಈಕೆಗೆ ಅಪಾರ ಜನಮನ್ನಣೆ ದೊರೆತಿದ್ದು, ಈಕೆಯ ಮೇಲೆ ಭರವಸೆ ಮತ್ತಷ್ಟು ಹೆಚ್ಚಿದೆ. ಇವರಿಗೆ ಇನ್ನಷ್ಟು ಜನಪ್ರಿಯತೆ ಸಿಕ್ಕಿ ಪ್ರಖ್ಯಾತಿಯನ್ನು ಪಡೆದು ಯಕ್ಷಲೋಕದಲ್ಲಿ ಇವರ ಹೆಸರು ಅಚ್ಚಳಿಯದೇ ಉಳಿಯಲಿ ಎನ್ನುವುದೇ ನಮ್ಮ ಆಶಯ














