
ಬಂಟ್ವಾಳ: ತಾಲೂಕು ಕೇಂದ್ರ ಬಿ.ಸಿ.ರೋಡಿನಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿ ಸುವಲ್ಲಿ ಸ್ಥಳೀಯಾಡಳಿತವಾದ ಬಂಟ್ವಾಳ ಪುರಸಭೆ ನಿರ್ಲಕ್ಷ ವಹಿಸಿದ್ದು, ಈ ತನಕ ಒಂದೇ ಒಂದು ಪಾರ್ಕಿಂಗ್ ಸ್ಥಳವನ್ನು ಗುರುತಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ಬಿ.ಸಿ.ರೋಡಿನಲ್ಲಿ ವಾಹನ ನಿಲ್ಲಿಸಬೇಕಾದರೆ ಸುತ್ತಾಟ ಮಾಡಬೇಕಾದ ಸ್ಥಿತಿ ಇದೆ.
ಸಾಮಾನ್ಯವಾಗಿ ಯಾವುದೇ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಅದಕ್ಕೆ ಬೇಕಾದ ಪಾರ್ಕಿಂಗ್ ಸ್ಥಳ ಇರಬೇಕಿರುವುದು ಕಡ್ಡಾಯ. ಬಹುತೇಕ ಸಂದರ್ಭದಲ್ಲಿ ತಳ ಅಂತಸ್ತನ್ನು ಪಾರ್ಕಿಂಗ್ ಸ್ಥಳವೆಂದು ಗುರುತಿಸಿ ಅನುಮತಿ ಯನ್ನು ನೀಡಲಾಗುತ್ತದೆ. ಆದರೆ ಬಳಿಕ ಕಟ್ಟಡ ನಿರ್ಮಾಣದ ವೇಳೆ ತಳ ಅಂತಸ್ತನ್ನೂ ಅಂಗಡಿ ಕೋಣೆಗಳಾಗಿ ವಿಭಾಗಿಸಿ ಮಾರಾಟ ಅಥವಾ ಬಾಡಿಗೆ ನೀಡಲಾಗುತ್ತದೆ. ಹೀಗಾಗಿ ಬಿ.ಸಿ. ರೋಡಿನ ಯಾವುದೇ ಖಾಸಗಿ ಹಾಗೂ ಸರಕಾರಿ ಕಟ್ಟಡದಲ್ಲಿ ಪಾರ್ಕಿಂಗ್ ಸ್ಥಳವೇ ಇಲ್ಲವಾಗಿದೆ.
ಈ ರೀತಿ ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಥಳ ಇಲ್ಲದೇ ಇದ್ದರೂ ಕ್ರಮಕೈಗೊಳ್ಳದ ಪುರಸಭೆಯು ಸಾರ್ವಜನಿಕ ಪಾರ್ಕಿಂಗ್ ಸ್ಥಳವನ್ನೂ ಗುರುತಿಸಿಲ್ಲ. ಹೀಗಾಗಿ ಅಗತ್ಯ ಕೆಲಸಕ್ಕೆ ತಮ್ಮ ಸ್ವಂತ ವಾಹನಗಳಲ್ಲಿ ಬರುವವರು ಎಲ್ಲೋ ವಾಹನವನ್ನು ನಿಲ್ಲಿಸಿ ಬರಬೇಕಾದ ಸ್ಥಿತಿ ಇದೆ. ಬೆಳಗ್ಗಿನ ಹೊತ್ತು ಅಲ್ಲಲ್ಲಿ ಇರುವ ಖಾಲಿ ಜಾಗಗಳು ತುಂಬಿ ಬಳಿಕ ರಸ್ತೆಯಲ್ಲೇ ವಾಹನ ನಿಲ್ಲಿಸಬೇಕಾದ ಸ್ಥಿತಿ ಇದೆ.
ಕೈಕುಂಜೆ ರಸ್ತೆಯ ಇಕ್ಕೆಲ ಪಾರ್ಕಿಂಗ್ ತಾಣ
ಬಿ.ಸಿ.ರೋಡಿನ ಕೈಕಂಬದಿಂದ ಸರ್ಕಲ್‌ವರೆಗೂ ಬೇರೆಲ್ಲೂ ವಾಹನ ನಿಲ್ಲಿಸುವ ಖಾಲಿ ಜಾಗಗಳಿಲ್ಲ. ಹೀಗಾಗಿ ಕೈಕುಂಜೆ ರಸ್ತೆಯ ಇಕ್ಕೆಲಗಳು ಸದ್ಯಕ್ಕೆ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಇದೇ ಪರಿಸರದಲ್ಲಿ ತಾಲೂಕು ಕಚೇರಿ, ನ್ಯಾಯಾಲಯ, ತಾ.ಪಂ., ಶಾಸಕರ ಕಚೇರಿ, ಡಾ| ಅಂಬೇಡ್ಕರ್ ಭವನ, ಬ್ಯಾಂಕ್ ಶಾಖೆಗಳು, ಮೆಸ್ಕಾಂ, ವಿವಿಧ ಸರಕಾರಿ ಕಚೇರಿಗಳು, ಹತ್ತಾರು ನ್ಯಾಯವಾದಿಗಳ ಕಚೇರಿಗಳು ಇರುವುದರಿಂದ ನೂರಾರು ವಾಹನಗಳು ಓಡಾಡುತ್ತವೆ.
ಇದರಲ್ಲಿ ಆಟೋ ನಿಲ್ದಾಣ, ಟೂರಿಸ್ಟ್ ಕಾರು ನಿಲ್ದಾಣ, ಟೆಂಪೊ ನಿಲ್ದಾಣಗಳಿದ್ದು, ಇತರ ವಾಹನಗಳನ್ನು ನಿಲ್ಲಿಸುವುದಕ್ಕೆ ಅವರ ಕಿರಿಕಿರಿಯೂ ಇದೆ. ಹೀಗಾಗಿ ಬೇರೆಲ್ಲೂ ಜಾಗವಿಲ್ಲದೆ ವಾಹನ ನಿಲ್ಲಿಸುವುದಕ್ಕೆ ಸುತ್ತಾಟ ಮಾಡಬೇಕಿರುವುದು ಅನಿವಾರ್ಯವಾಗಿದೆ.
ಖಾಲಿ ಜಾಗ ಇದೆ
ಕೈಕುಂಜೆ ರಸ್ತೆಯಲ್ಲಿ ರೈಲು ನಿಲ್ದಾಣದವರೆಗೂ ಒಂದಷ್ಟು ಖಾಲಿ ಜಾಗಗಳಲ್ಲಿದ್ದು, ಪುರಸಭೆಯು ಅವುಗಳನ್ನು ಸ್ವತ್ಛ ಮಾಡಿ ಪಾರ್ಕಿಂಗ್ ಸ್ಥಳವಾಗಿ ಗುರುತಿಸಿಬೇಕಿದೆ. ಜತೆಗೆ ಬಿ.ಸಿ.ರೋಡು ಸರ್ವೀಸ್ ರಸ್ತೆಯ ಬದಿ ಬಂಟ್ವಾಳ ತಾ.ಪಂ.ಗೆ ಸೇರಿದ ಖಾಲಿ ಜಾಗವಿದ್ದು, ಅಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ವಾಹನಗಳನ್ನು ನಿಲ್ಲಿಸಬಹುದಾಗಿದೆ. ಸದ್ಯಕ್ಕೆ ತಾ.ಪಂ.ನ ಸ್ಥಳದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡುವ ಕುರಿತು ಚರ್ಚೆಗಳು ಆರಂಭಗೊಂಡಿದೆ. ಜತೆಗೆ ಮಂಗಳೂರಿನಲ್ಲಿರುವ ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ ಬರುತ್ತಿದ್ದು, ನಮಗೂ ಒಂದಷ್ಟು ಪಾರ್ಕಿಂಗ್ ಜಾಗಬೇಕು ಎಂದು ಪೊಲೀಸರು ಪುರಸಭೆಯ ಬಳಿ ಕೇಳುತ್ತಿದ್ದಾರೆ. ಆದರೆ ಯಾರಿಗೂ ಸಮರ್ಪಕ ಪಾರ್ಕಿಂಗ್ ಜಾಗ ಇಲ್ಲವಾಗಿದೆ.
ಅರ್ಧಕ್ಕೆ ನಿಂತ ಹಿಂದಿನ ಪ್ರಸ್ತಾವಗಳು
ಬಂಟ್ವಾಳ ಪುರಸಭೆಯಿಂದ ಪಾರ್ಕಿಂಗ್ ಸ್ಥಳವನ್ನು ಗುರುತಿಸುವ ನಿಟ್ಟಿನಲ್ಲಿ ಹಿಂದೊಮ್ಮೆ ಸ್ಥಳ ಪರಿಶೀಲನೆಯ ಕಾರ್ಯ ನಡೆದಿದ್ದು, ಬಳಿಕ ಅದು ಮುಂದುವರಿಯಲೇ ಇಲ್ಲ. ಮುಂದೆ ಪುರಸಭೆ, ಸಂಚಾರ ಪೊಲೀಸರು, ತಾಲೂಕು ಆಡಳಿತದ ಪ್ರಮುಖರು ಸಭೆ ನಡೆಸಿ ಪಾರ್ಕಿಂಗ್ ಸ್ಥಳ ಗುರುತಿನ ಮಾತುಗಳು ಕೇಳಿಬಂದರೂ ಅದು ಅರ್ಧಕ್ಕೆ ನಿಂತು ಹೋಗಿದೆ.














