
ಗಂಗಾವತಿ: ಮಧ್ಯರಾತ್ರಿ ವೇಳೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದ ವಿದೇಶಿ ಪ್ರವಾಸಿಗರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿ ಲೈಂಗಿಕ ಮತ್ತು ದೈಹಿಕ ದಾಳಿ ಮಾಡಿದ ಪರಿಣಾಮ ಇಬ್ಬರು ವಿದೇಶಿ ಹಾಗೂ ಇಬ್ಬರು ದೇಶಿಯ ಪ್ರವಾಸಿಗರು ತೀವ್ರ ಗಾಯಗೊಂಡಿರುವ ಪ್ರಕರಣ ಗಂಗಾವತಿ ತಾಲೂಕಿನ ಸಾಣಾಪೂರ ಕೆರೆ(ಲೇಕ್) ಗಂಗಮ್ಮನ ಗುಡಿ ಹತ್ತಿರ ಗುರುವಾರ ಮಧ್ಯರಾತ್ರಿ ನಡೆದಿದೆ.
ಇಸ್ರೇಲ್ ಮೂಲದ ನಾಮಾ(27), ಅಮೇರಿಕಾ ಮೂಲದ ಡ್ಯಾನಿಯೇಲ್(23) ಮಹಾರಾಷ್ಟ್ರದ ನಾಸಿಕ್ ಪಂಕಜ್(43) ಸ್ಥಳೀಯ ಆನೆಗೊಂದಿ ಹಾರ್ಟ್ ಲೈನ್ ಹ್ಯಾಪಿ ಹೋಂ ರೆಸಾರ್ಟ್ ಮಾಲೀಕಗಳಾದ ಅಂಬಿಕಾ ನಾಯ್ಕ್(29) ಹಾಗೂ ಡಿ.ಬಾಸ್ (42) ಇವರು ಸಾಣಾಪೂರ ಕೆರೆಯ ಗಂಗಮ್ಮ ಗುಡಿ ಹತ್ತಿರ ಸೇರಿ ಲಘು ಸಂಗೀತ ಕಚೇರಿ ನಡೆಸುವ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಮೂವರು ಅಪರಿಚಿತರು ಏಕಾಏಕಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಮತ್ತು ದೈಹಿಕ ದಾಳಿ ನಡೆಸಿದ್ದು ಇದನ್ನು ಡ್ಯಾನಿಯೇಲ್, ಪಂಕಜ್ ಹಾಗೂ ಡಿ.ಬಾಸ್ ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಪರಸ್ಪರ ಜಗಳ ನಡೆದು ಮೂರು ಜನ ಅಪರಿಚಿತರು ಡ್ಯಾನಿಯೇಲ್, ಪಂಕಜ್ ಹಾಗೂ ಡಿ.ಬಾಸ್ ಇವರನ್ನು ಪಕ್ಕದಲ್ಲಿರುವ ಎಡದಂಡೆ ಕಾಲುವೆಗೆ ತಳ್ಳಿದ್ದಾರೆ. ಡ್ಯಾನಿಯೇಲ್, ಪಂಕಜ್ ಕಾಲುವೆಯಿಂದ ಮೇಲೆ ಬಂದು ಹೆಣ್ಣು ಮಕ್ಕಳನ್ನು ಹಲ್ಲೆಯಿಂದ ಸಂರಕ್ಷಣೆ ಮಾಡಿದ್ದು ಡಿ.ಬಾಸ್ ನಾಪತ್ತೆಯಾಗಿದ್ದಾರೆನ್ನಲಾಗಿದೆ.
ಈ ಮಧ್ಯೆ ವಿಷಯ ಪೊಲೀಸರಿಗೆ ತಿಳಿದು ಮಧ್ಯ ರಾತ್ರಿ ಸ್ಥಳಕ್ಕೆ ಡಿವೈಎಸ್ಪಿ ಸಿದ್ದಲಿಂಗನಗೌಡ ಪಾಟೀಲ್, ಸಿಪಿಐ ಸೋಮಶೇಖರ್ ಜುಟ್ಟಲ್ ಹಾಗೂ ಪೊಲೀಸರು ತೆರಳಿ ಘಟನೆ ಬಗ್ಗೆ ಮಾಹಿತಿ ಪಡೆದು ಗಾಯಳುಗಳನ್ನು ಸರಕಾರಿ ಎಂಸಿಎಚ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.














