
ಬೆಂಗಳೂರು: ಹಲವು ವರ್ಷಗಳಿಂದ ದೂರದಿಂದ ವಿಧಾನಸೌಧವನ್ನು ಕಣ್ತುಂಬಿಕೊಳ್ಳುತ್ತಿದ್ದ ನಾಡಿನ ಜನರಿಗೆ ಸಿಹಿ ಸುದ್ದಿ ನೀಡಲು ವಿಧಾನಸಭೆ ಕಾರ್ಯಾಲಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪ್ರತೀ ರವಿವಾರ ಸಂಜೆ 4ರಿಂದ 7ರ ವರೆಗೆ ವಿಧಾನಸೌಧ ಆವರಣದೊಳಗೆ ಸಾರ್ವಜನಿಕರು ಮುಕ್ತವಾಗಿ ಪ್ರವೇಶಿಸುವ ಅವಕಾಶ ನೀಡಲು ಚಿಂತನೆ ನಡೆಸಿದೆ.
ವಿಧಾನಸೌಧದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ಪುಸ್ತಕ ಮೇಳ ಯಶಸ್ವಿಯಾದ ಬೆನ್ನಲ್ಲೇ ಪ್ರೇರಣೆ ಪಡೆದಿರುವ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು, ವಾರಾಂತ್ಯದಲ್ಲಿ ವಿಧಾನಸೌಧ- ವಿಕಾಸ
ಸೌಧ ಆವರಣದೊಳಗೆ ಸಾರ್ವಜನಿಕ ರನ್ನು ಬಿಡುವ ಪ್ರಸ್ತಾಪಕ್ಕೆ ಹಸುರು ನಿಶಾನೆ ತೋರಲು ತುದಿಗಾಲಲ್ಲಿ ನಿಂತಿದ್ದಾರೆ.
ಪುಸ್ತಕ ಮೇಳದ ವೇಳೆ ಸಾರ್ವಜನಿ ಕರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದ ಸ್ಪೀಕರ್ ಖಾದರ್, ಜನರಿಂದ ಬಂದ ಅಭಿಪ್ರಾಯಗಳಿಗೆ ಮನ್ನಣೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭ ಪೊಲೀಸ್ ಬ್ಯಾಂಡ್, ಆರ್ಮಿ ಬ್ಯಾಂಡ್‌ನಂತಹ ವಿವಿಧ ಬ್ಯಾಂಡ್‌ಗಳಿಂದ ಸಂಗೀತ ರಸಸಂಜೆಯನ್ನೂ ಆಯೋಜಿಸಲಾಗುತ್ತದೆ. ಆದರೆ ವಿಧಾನ ಸೌಧ ಮತ್ತು ವಿಕಾಸಸೌಧ ಕಟ್ಟಡದೊಳಗೆ ಪ್ರವೇಶಾವಕಾಶ ಇರುವುದಿಲ್ಲ.













