
ಮೈಸೂರು : ಕರೆಂಟ್ ಕಳ್ಳರಿಗೆ ಸೆಸ್ಕ್ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದು, ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ಸೆಸ್ಕ್ ಜಾಗೃತ ದಳದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.ಸೆಸ್ಕ್ ನಿಂದ 6 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿದೆ.
ಸೆಸ್ಕ್ ವಿಭಾಗದ ವ್ಯಾಪ್ತಿಗೆ ಒಳಪಡುವ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ಐದು ಜಿಲ್ಲೆಗಳಲ್ಲಿ ಅಕ್ರಮವಾಗಿ ವಿದ್ಯುತ್ ಕಳ್ಳತನ, ವಿದ್ಯುತ್ ದುರುಪಯೋಗ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಪ್ರಕರಣಗಳನ್ನು ದಾಖಲಿಸಲಾಗಿದೆ.
ಗೃಹ , ವಾಣಿಜ್ಯ ಕರೆಂಟ್ ಪಡೆದವರ ಪೈಕಿ 1,312 ವಿದ್ಯುತ್ ಕಳ್ಳತನ ಪ್ರಕರಣಗಳು ಸಾಬೀತಾಗಿದೆ. ಈ ಪ್ರಕರಣಗಳಿಂದ ಒಟ್ಟು 6 ಕೋಟಿ 36 ಲಕ್ಷದ 72 ಸಾವಿರ ರೂ. ದಂಡ ವಸೂಲಿ ಮಾಡಲಾಗುತ್ತಿದೆ.
ವಿದ್ಯುತ್ ಕಳ್ಳತನ ಮಾಡುವುದು ವಿದ್ಯುಚ್ಛಕ್ತಿ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಸ್ವರೂಪದ ಶಿಕ್ಷಾರ್ಹ ಅಪರಾಧವಾಗಿದೆ.ಹೀಗಾಗಿಯೇ ಸೆಸ್ಕ್ ಅಧಿಕಾರಿಗಳು ಕಟ್ಟನಿಟ್ಟಿನ ಕಾರ್ಯಾಚರಣೆ ನಡೆಸಿದ್ದಾರೆ.













