ಕೊಂಡಾಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಶಿವ ದುರ್ಗಾಂಭ ಮಠಕ್ಕೆ ಶಿಲಾನ್ಯಾಸ-ಕಹಳೆ ನ್ಯೂಸ್

ಮಂಗಳೂರು:ಜಗತ್ತಿನಲ್ಲಿ ಒಳ್ಳೆಯ ಶಕ್ತಿಗಳು ಇರುವಂತೆ ದುಷ್ಟ ಶಕ್ತಿಗಳೂ ಇವೆ. ದೇವಸ್ಥಾನ, ಮಠಗಳು ಹೆಚ್ಚಾದಂತೆ ಮನುಷ್ಯನಲ್ಲಿರುವ ಕಾಮ, ಕ್ರೋಧ, ಮತ್ಸರ ನಿಯಂತ್ರಣಗೊಂಡು ದುಷ್ಟ ಶಕ್ತಿಗಳು ದೂರವಾಗುತ್ತದೆ, ದೇವರ ಮೇಲಿನ ಧೃಡ ನಂಬಿಕೆ ನಮ್ಮ ಕೆಲಸ ಕಾರ್ಯಗಳಿಗೆ ಶಕ್ತಿ ನೀಡುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ಹಾಗೂ ಮೊಕ್ತೇಸರ ಲಕ್ಷ್ಮೀ ನಾರಾಯಣ ಅಸ್ರಣ್ಣ ಹೇಳಿದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಡೂರು ಮರಿಯಾಣ ಪಾಲು ಕೊಂಡಾಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಶಿವ ದುರ್ಗಾಂಭ ಮಠಕ್ಕೆ ಶಿಲಾನ್ಯಾಸಗೈದು ಮಾತನಾಡಿದರು.
ದೇವ ಋಣ, ಸಮಾಜ ಋಣ, ಮಾತಾಪಿತರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ, ಆದರೂ ಸೇವೆಯ ಮೂಲಕ ಋಣ ತೀರಿಸುವ ಪ್ರಯತ್ನ ಮಾಡಬೇಕು. ಅಭಿವೃದ್ಧಿ, ಇತರ ಕಾರ್ಯಗಳು ಯಶಸ್ವಿಯಾಗಿ ನಡೆಯಬೇಕಾದರೆ ದೇವತಾ ಶಕ್ತಿ ಅಗತ್ಯ. ಮಠ, ಮಂದಿರಗಳಲ್ಲಿ ನಿರಂತರ ಪೂಜೆ ನಡೆಯುವುದರಿಂದ ದೇವತಾ ಶಕ್ತಿಗಳಿಂದಾಗಿ ಸುಃಖ, ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಿವ ದುರ್ಗಾಂಭ ಮಠದ ಶ್ರೀ ಪರಮಪೂಜ್ಯ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಕೂಡ್ಲು ಸದಾಶಿವ ದೇವಸ್ಥಾನದ ಅರ್ಚಕ ನಾಗೇಂದ್ರ ಭಟ್, ವಿಟ್ಲ ಸೀಮೆ ಹೊಸಬೀಡು ಅರಮನೆಯ ಜನಾರ್ದನ ಬಳ್ಳಾಲ್, ಚಲನಚಿತ್ರ ನಟ ಎಸ್. ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಉದಯಕುಮಾರ್ ಶೆಟ್ಟಿ, ನ್ಯಾಯವಾದಿ ಉಮೇಶ್ ಶೆಟ್ಟಿ, ಉದ್ಯಮಿ ದಯಾನಂದ ಬೆಂಗಳೂರು, ಮಠದ ಮೊಕ್ತೇಸರ ಯಶ್‌ವಂತ್ ಅಳ್ವ, ಕೋಟೆಕಾರ್ ಪ.ಪಂ. ಸದಸ್ಯ ನವೀನ್ ಕೊಂಡಾಣ ಮೊದಲಾದವರು ಉಪಸ್ಥಿತರಿದ್ದರು.














