ಮಡಿಕೇರಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣ:ಕಿರಾತಕನ ಬಂಧನದ ಬೆನ್ನಲ್ಲೇ, ಮರದ ಮೇಲೆ ಪತ್ತೆಯಾದ ರುಂಡ ! – ಕಹಳೆ ನ್ಯೂಸ್

ಮಡಿಕೇರಿ: ಅಪ್ರಾಪ್ತೆ ಜತೆ ನಿಶ್ಚಿತಾರ್ಥ ಆಗದ ಸಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ತಲೆಕಡಿದಿದ್ದ ಕಿರಾತಕನ ಬಂಧನದ ಬೆನ್ನಲ್ಲೇ ಪೊಲೀಸರು ಬಾಲಕಿಯ ರುಂಡವನ್ನು ಪತ್ತೆ ಮಾಡಿದ್ದಾರೆ.
ಇಂದು ಬೆಳಗ್ಗೆ ಆರೋಪಿ ಪೋಲಿಸ್ ಠಾಣೆಗೆ ಬಂದು ಶರಣಾಗಿದ್ದ ಎನ್ನಲಾಗಿದ್ದು, ಆ ಬಳಿಕ ಬಾಲಕಿ ಹತ್ಯೆ ಮಾಡಿದ ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಬಾಲಕಿಯ ರುಂಡ ಮರವೊಂದರ ಮೇಲೆ ಪತ್ತೆಯಾಗಿದೆ.
ಸ್ಥಳದಲ್ಲಿ ಬಾಲಕಿಯ ಚಪ್ಪಲಿ ಕೂಡ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪ್ರಾಪ್ತ ಬಾಲಕಿ ಹತ್ಯೆ ನಡೆದ ಅನತಿ ದೂರದಲ್ಲೇ ಬಾಲಕಿಯ ತಲೆ ಪತ್ತೆಯಾಗಿದ್ದು, ಬಾಲಕಿಯನ್ನು ಕಡಿದು ಆರೋಪಿ ತಲೆಯನ್ನು ಮರದ ಮೇಲಿರಿಸಿ ಎಸ್ಕೇಪ್ ಆಗಿದ್ದನಂತೆ.
ಸದ್ಯ ಪೊಲೀಸರು ಸ್ಥಳದಲ್ಲಿ ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಮನೆ ಬಳಿಗೆ ಸ್ಥಳ ಮಹಜರು ಮಾಡಲು ಕರೆದೊಯ್ದಿದ್ದಾರೆ. ಕೊಡಗಿನ ಸೋಮವಾರಪೇಟೆ ಪೊಲೀಸರು ಆರೋಪಿ ಪ್ರಕಾಶ್‌ನನ್ನು ಬಂಧಿಸಿದ್ದಾರೆ. ಆರೋಪಿ ಪ್ರಕಾಶ್, ಅಪ್ರಾಪ್ತೆ ಜತೆ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದ. ಈ ವಿಷಯ ಗೊತ್ತಾಗಿ ಪೊಲೀಸರು ನಿಶ್ಚಿತಾರ್ಥ ನಿಲ್ಲಿಸಿದ್ದರು.
ಇದರಿಂದ ಸಿಟ್ಟಿಗೆದ್ದು, ಅಪ್ರಾಪ್ತೆಯ ಪೋಷಕರ ಮೇಲೆ ಹಲ್ಲೆ ಮಾಡಿ, ಬಾಲಕಿಯನ್ನು ಎಳೆದುಕೊಂಡು ಹೋಗಿದ್ದ. ಕೊನೆಗೆ ಬಾಲಕಿಯ ತಲೆ ಕಡಿದು, ರುಂಡವನ್ನು ತೆಗೆದುಕೊಂಡು ಹೋಗಿ ಮರದ ಮೇಲಿಟ್ಟಿದ್ದ. ಈಗ ರುಂಡವನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ
ಆರೋಪಿ ನಿಶ್ಚಿತಾರ್ಥ ಆಗದ ಸಿಟ್ಟಿನಲ್ಲಿ ಕೊಲೆ ಮಾಡಿದ್ದ ಎನ್ನಲಾಗಿತ್ತು. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಕೃತ್ಯ ಎಸಗಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದನಂತೆ. ಅದರಂತೆ ನಿಶ್ಚಿತಾರ್ಥದ ಬಳಿಕ ಬಾಲಕಿಯ ಅಣ್ಣಂದಿರನ್ನು ಆರೋಪಿಯೇ ಬೇರೆಡೆ ಕರೆದೊಯ್ದಿದ್ದಾನೆ, ಬಳಿಕ ಅವರನ್ನು ಅಲ್ಲಿಯೇ ಬಿಟ್ಟು ಬಂದು ಬಳಿಕ ಬಾಲಕಿಯ ಹತ್ಯೆ ಮಾಡಿದ್ದಾನೆ. ಅಲ್ಲದೇ ಆರೋಪಿ ಒಬ್ಬನೇ ಈ ಹತ್ಯೆ ಮಾಡಿಲ್ಲ ಎನ್ನಲಾಗಿದೆ.
ಇವನೊಂದಿಗೆ ಇನ್ನೂ ಇಬ್ಬರು ಮೂವರು ಸೇರಿ ಪ್ಲಾನ್ ಮಾಡಿ ಹತ್ಯೆ ಮಾಡಿದ್ದಾರೆ. ಅವನನ್ನು ಯಾವುದೇ ಕಾರಣಕ್ಕೂ ಜಾಮೀನಿನ ಮೇಲೆ ಬಿಡುಗಡೆ ಮಾಡಬಾರದು. ಬಿಡುಗಡೆ ಮಾಡಿದರೆ ಗ್ರಾಮದ ಇನ್ನಷ್ಟು ಜನರನ್ನು ಹತ್ಯೆ ಮಾಡುವ ಸಾಧ್ಯತೆ ಇದೆ. ಅವರ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿರುವವರನ್ನು ಹತ್ಯೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಅವನಿಗೆ ಕಠಿಣ ಶಿಕ್ಷೆ ಆಗಬೇಕು, ಅವನಿಗೆ ಮರಣ ದಂಡನೆ ಆಗಬೇಕು, ಇಲ್ಲ ಜೀವನ ಪರ್ಯಂತ ಜೈಲಿನಲ್ಲಿ ಇರುವಂತೆ ಜೀವಾವಧಿ ಶಿಕ್ಷೆ ಆಗಬೇಕು. ಬಿಡುಗಡೆ ಆದರೆ ಅವನಿಗೆ ಇನ್ನಷ್ಟು ಧೈರ್ಯ ಬಂದಂತೆ ಆಗುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.














