Sunday, May 19, 2024
ಸುದ್ದಿ

ವರ್ಣರಂಜಿತ ಮಂಗಳೂರು ದಸರಾ ಸಂಪನ್ನ ; ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು – ಕಹಳೆ ನ್ಯೂಸ್

ಬೀದಿಯುದ್ದಕ್ಕೂ ಝಗಮಗಿಸುವ ವಿದ್ಯುತ್ ದೀಪ, ತಾಸೆ ಪೆಟ್ಟಿಗೆ ಕುಣಿಯುವ ಹುಲಿ ವೇಷಧಾರಿಗಳ ತಂಡ, ವೈವಿಧ್ಯಮಯ ಕಥೆ, ಘಟನೆಗಳನ್ನು ಪ್ರಸ್ತುತಪಡಿಸುವ ಸ್ತಬ್ಧಚಿತ್ರಗಳು ಹಿಂದಿನಿಂದ ಸರ್ವಾಲಂಕೃತ ವಾಹನದಲ್ಲಿ ಸಾಗಿ ಬರುವ ಶಾರದಾ ಮೂರ್ತಿ, ನವದುರ್ಗೆಯರು…ಭಕ್ತ ವೃಂದದ ಜಯಕಾರ…

ಜಾಹೀರಾತು
ಜಾಹೀರಾತು

– ಇದು ಶುಕ್ರವಾರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಆರಂಭಗೊಂಡ ಮಂಗಳೂರು ದಸರಾ ಮೆರವಣಿಗೆಯ ವೈಭವ.
ನವದುರ್ಗೆಯರ ಸಂಭ್ರಮದ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಕುದ್ರೋಳಿ ದೇವಸ್ಥಾನದಿಂದ ಎಂ.ಜಿ.ರೋಡ್‌ವರೆಗೆ ಜನ ಸಾಗರವೇ ನೆರೆದಿತ್ತು. ಶುಕ್ರವಾರ ಮುಂಜಾನೆ ದೇವಸ್ಥಾನದಲ್ಲಿ ವಾಗೀಶ್ವರಿ ದುರ್ಗಾಹೋಮ, ಮಧ್ಯಾಹ್ನ ಶಿವಪೂಜೆ, ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವಗಳು ನಡೆದು ಶಾರದಾ ಮೂರ್ತಿ ವಿಸರ್ಜನೆಗೆ ಚಾಲನೆ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


‘ಗೋವಿಂದಾ ಅನ್ನಿ ಗೋವಿಂದ’ ಎನ್ನುವ ಭಕ್ತ ಸಮೂಹದ ಜಯಘೋಷದೊಂದಿಗೆ ಮಹಾಗಣಪತಿಯ ವಿಗ್ರಹಕ್ಕೆ ಪೂಜೆ ನೆರವೇರಿಸಿ ಶೋಭಾಯಾತ್ರೆಯ ಮುಂಚೂಣಿಯ ಅಲಂಕೃತ ವಾಹನದಲ್ಲಿ ಇರಿಸಲಾಯಿತು. ಬಳಿಕ ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಲಾರಿಗಳಲ್ಲಿ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ ಮತ್ತು ಆದಿಶಕ್ತಿಯರೊಂದಿಗೆ ಶಾರದಾ ಮಾತೆ ಮತ್ತು ನಾರಾಯಣಗುರುಗಳ ಚಿತ್ರಗಳನ್ನು ಇಟ್ಟು ಮೆರವಣಿಗೆ ಆರಂಭಿಸಲಾಯಿತು. ದೇವಿಯರ ವಿಗ್ರಹ ಮಂಟಪದಿಂದ ಹೊರ ತರುತ್ತಿದ್ದಂತೆ ಸೇರಿದ್ದ ಭಕ್ತ ಸಮೂಹ ಜಯಘೋಷ ಹೊರಡಿಸಿದರು.

ಜಾಹೀರಾತು
ಜಾಹೀರಾತು


ಕ್ಷೇತ್ರ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಶೋಭಾಯಾತ್ರೆಯ ನೇತೃತ್ವ ವಹಿಸಿದ್ದರು. ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್, ಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ಬಿ.ಕೆ.ತಾರಾನಾಥ್, ರವಿಶಂಕರ್ ಮಿಜಾರು, ಕೆ.ಮಹೇಶ್ಚಂದ್ರ, ಅಭಿವೃದ್ಧಿ ಸಮಿತಿಯ ಜಯ ಸಿ.ಸುವರ್ಣ, ಊರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜಿ. ಸುವರ್ಣ ಮತ್ತಿತರರಿದ್ದರು.

ಜಾಹೀರಾತು

ವರ್ಣಾಲಂಕೃತ ಮೆರವಣಿಗೆ:  ವರ್ಷದಿಂದ ವರ್ಷಕ್ಕೆ ವೈಭವ ಹೆಚ್ಚಿಸಿಕೊಳ್ಳುತ್ತಿರುವ ಮಂಗಳೂರು ದಸರಾ ಮೆರವಣಿಗೆ ಈ ಬಾರಿಯೂ ಜನತೆ ಸಂಭ್ರಮ ಸಡಗರಗಳಿಂದ ಪಾಲ್ಗೊಳ್ಳುವಂತೆ ಮಾಡಿತು. ಮೆರವಣಿಗೆ ಸಾಗಿ ಬರುವ ಬೀದಿಗಳೆಲ್ಲವೂ ವರ್ಣರಂಜಿತ ದೀಪಗಳ ಸಾಲು, ನಾರಾಯಣಗುರು ಭಾವಚಿತ್ರವಿರುವ ಹಳದಿ ಬಣ್ಣದ ಪತಾಕೆಗಳ ತೋರಣ, ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್ ಆವರಿಸಿತ್ತು. ಸಾಲುಸಾಲು ಕೇರಳ ಶೈಲಿ ಕೊಡೆಗಳು, ವಿವಿಧ ಬೊಂಬೆಗಳು, ಕರ್ನಾಟಕದ ಜಾನಪದ ವೈವಿಧ್ಯ ಸಾರುವ ಡೊಳ್ಳುಕುಣಿತ, ನರ್ತನಗಳೊಂದಿಗೆ ಕೇರಳ ಚೆಂಡೆ, ಸ್ಥಳೀಯ ಚೆಂಡೆಗಳು, ಲಾರಿ ತುಂಬ ಕೇಕೆ ಹಾಕುವ ಹುಲಿವೇಷಗಳು, ಪುರಾಣ ಕತೆಗಳ ಸಂದರ್ಭಗಳನ್ನು ವ್ಯಕ್ತಪಡಿಸುವ 75ಕ್ಕೂ ಹೆಚ್ಚು ಸ್ತಬ್ಧಚಿತ್ರ, ಬ್ಯಾಂಡ್‌ಸೆಟ್‌ಗಳು ಮೆರವಣಿಗೆ ಹುರುಪು ಹೆಚ್ಚಿಸಿದವು. ಮೆರವಣಿಗೆಯಲ್ಲಿ ಸೇರಿದವರಲ್ಲದೆ ಇಕ್ಕೆಲಗಳಲ್ಲಿರುವ ಕಟ್ಟಡಗಳಲ್ಲೂ ಜನ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. 100ಕ್ಕೂ ಅಧಿಕ ವೇಷಭೂಷಣ, ವಾದ್ಯಮೇಳ ತಂಡ, ಭಜನಾ ತಂಡಗಳು, ಗೊಂಬೆ ಕುಣಿತದ ತಂಡಗಳು, ಹುಲಿ ಕುಣಿದ ತಂಡ, ಭಾಗವಹಿಸಿದ್ದವು. ವಿವಿಧೆಡೆ ಆರ್ಕೆಸ್ಟ್ರಾ ತಂಡಗಳಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುಂಜಾನೆ ವಿಸರ್ಜನೆ:  ವರ್ಣರಂಜಿತ ಮಂಗಳೂರು ದಸರಾ ಮೆರವಣಿಗೆ ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಭಾಗ್, ಎಂ.ಜಿ.ರಸ್ತೆ, ಕೆ.ಎಸ್.ರಾವ್ ರಸ್ತೆ, ವಿ.ವಿ.ಕಾಲೇಜು, ಜಿ.ಎಚ್.ಎಸ್.ರಸ್ತೆ, ರಥಬೀದಿ, ಅಳಕೆ ಮೂಲಕ ಸುಮಾರು 9 ಕಿ.ಮೀ. ಸಾಗಿ ಮತ್ತೆ ಕುದ್ರೋಳಿ ಕ್ಷೇತ್ರ ತಲುಪುವಾಗ ಮುಂಜಾನೆಯಾಗುತ್ತದೆ. 9 ದಿನ ಲಕ್ಷಾಂತರ ಭಕ್ತರ ಪೂಜೆ-ಪುನಸ್ಕಾರ ಸ್ವೀಕರಿಸಿದ ನವ ದುರ್ಗೆಯರ ಮೂರ್ತಿ ಅ.20 ವಿಸರ್ಜನೆ ಮುಂಜಾನೆ 4 ಗಂಟೆ ವೇಳೆಗೆ ವಿಸರ್ಜನೆಗೊಳ್ಳಲಿದೆ.